ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಮಾಧ್ಯಮಗಳ ಮೇಲೆ ಮುಗಿಬಿದ್ದಿದ್ದಾರೆ. ಹೈದರಾಬಾದ್ ನಲ್ಲಿ ಕೆಸಿಆರ್ ಅವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಮಾತನಾಡುತ್ತಾ “ಒಳ್ಳೆಯ ವಿಷಯಗಳನ್ನು ಬರೆಯಿರಿ ಅಥವಾ ನಿದ್ದೆ ಮಾಡಿ. ನಿಮ್ಮ ತಲೆ ಕೆಟ್ಟಿದೆ. ನಿಮ್ಮ ಕರ್ಮ, ಖಂಡಿತ ನಿಮಗೆ ಕೊರೊನಾ ತಟ್ಟುತ್ತದೆ. ಇದು ನನ್ನ ಶಾಪ” ಎಂದರು.
ಕೆ. ಚಂದ್ರಶೇಖರ್ ರಾವ್ ಕೋಪಕ್ಕೆ ಕಾರಣವೇನು?
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಅವರು ಈ ರೀತಿ ಮಾತನಾಡಲು ಕಾರಣವೇನೆಂದರೆ, ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಅವರು ಬಾಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಜೂನ್ 3ರವರೆಗೆ ಲಾಕ್ ಡೌನ್ ಮುಂದುವರಿಸಬೇಕೆಂಬ ಸಲಹೆ ನೀಡಿರುವ ಕುರಿತು ಹೇಳಿದ್ದರು. ಆದ್ರೆ ಕೆಲ ಮಾಧ್ಯಮಗಳು ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿ, “ಲಾಕ್ ಡೌನ್ ಜೂನ್ 3ರವರೆಗೆ ಮುಂದುವರಿಯಲಿದೆ” ಎಂದು ವರದಿ ಮಾಡಿದ್ದವು. ಇದರಿಂದ ಕೆಸಿಆರ್ ಅವರು ಬೇಸರಗೊಂಡಿದ್ದು, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಇದಲ್ಲದೆ ರಾಜ್ಯದಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್ಮೆಂಟ್ ಅಥವಾ ಪಿಪಿಇ ಕೊರತೆ ಇದೆ ಎಂಬ ಸುದ್ದಿ ಮಾಧ್ಯಮಗಳ ವರದಿಗೂ ಅವರು ಕೆಂಡವಾದರು. “ನಮ್ಮಲ್ಲಿ 40,000 ಪಿಪಿಇ ಇದೆಯೆಂದು ನಿಮಗೆ ತಿಳಿದಿದೆಯೇ? ವೈದ್ಯರು ಬಹಳಷ್ಟು ತ್ಯಾಗಗಳನ್ನು ಮಾಡುತ್ತಿದ್ದಾರೆ, ಅವರಿಗೆ ಧೈರ್ಯ ತುಂಬಬೇಕು. ಆದರೆ ನೀವು ಪಿಪಿಇ ಇಲ್ಲ ಎಂದು ಬರೆಯುತ್ತಿದ್ದರೆ ಇದರಿಂದ ಏನಾದರೂ ಲಾಭವಿದೆಯೇ?” ಎಂದು ಪ್ರಶ್ನಿಸಿದರು.