ಮೈಸೂರು : ಕೊರೊನಾ ಹೆಸರಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಟ್ವಿಟ್ಟರ್ ನಲ್ಲಿ ಲೆಕ್ಕ ಕೊಡಿ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾಜಿ ಸಚಿವ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ ಎಂದು ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ ಎಂದು ಕುಟುಕಿದರು.
ಹಾಸಿಗೆ ಇಲ್ಲ, ದಿಂಬಿಲ್ಲ ಎನ್ನುವುದನ್ನು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ ಎಂದ ಹಳ್ಳಿಹಳ್ಳಿ, ಆಡಳಿತ ಪಕ್ಷ, ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದು ಸಮಯವಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.