ಈ ಬಾರಿ ವಿದ್ಯಾರ್ಥಿಗಳಿಗೆ ಇಲ್ಲ ರಿಯಾಯಿತಿ ಬಸ್‌ಪಾಸ್ ?
ಬೆಂಗಳೂರು, ಸೆಪ್ಟೆಂಬರ್01: ಕೊರೋನಾದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿ ಕರ್ನಾಟಕದ 4 ರಾಜ್ಯ ಸಾರಿಗೆ ಸಂಸ್ಥೆ ನಿಗಮಗಳು ಆರ್ಥಿಕ ಸಂಕಷ್ಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ.
ಸಾರಿಗೆ ಸಂಸ್ಥೆ ನಿಗಮ ಸಿಬ್ಬಂದಿಗಳ ವೇತನಕ್ಕಾಗಿ ಆದಾಯವಿಲ್ಲದೇ ಸಂಸ್ಥೆಯು ಸರ್ಕಾರದ ಮೊರೆ ಹೋಗಿವೆ. ಜೂನ್ನಿಂದ ನವೆಂಬರ್ ವರೆಗಿನ ಸಂಬಳಕ್ಕಾಗಿ 1,015.85 ಕೋಟಿ ರೂ. ನೀಡಬೇಕೆಂದು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಸರ್ಕಾರ ಕೂಡ ಹಂತಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತಲಿದ್ದು, ಇದೀಗ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ವೇತನಕ್ಕೆ 423 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಮಧ್ಯೆ ಸರ್ಕಾರ ರಾಜ್ಯ ಸಾರಿಗೆ ಸಂಸ್ಥೆಗೆ ವಿಧಿಸಲಾಗಿರುವ ಷರತ್ತಿನಲ್ಲಿ, ವಿದ್ಯಾರ್ಥಿಗಳಿಗೆ ರಿಯಾಯ್ತಿ ಬಸ್ ಪಾಸ್ ನೀಡಿದರೆ ಅದರ ಮೊತ್ತವನ್ನು ವಿದ್ಯಾರ್ಥಿ ಅಥವಾ ಸಂಸ್ಥೆಯಿಂದ ಭರಿಸುವಂತೆ ತಿಳಿಸಿದೆ.
ಸರ್ಕಾರವು ಬಿಡುಗಡೆ ಮಾಡುವ ಮೊತ್ತವನ್ನು ಅಧಿಕಾರಿ ಮತ್ತು ಸಿಬ್ಬಂದಿಯ ಮೂಲ ವೇತನ ಹಾಗೂ ತುಟ್ಟಿಭತ್ಯೆಯ ಶೇ.75 ಪಾವತಿಸಲು ಮಾತ್ರ ಬಳಸಿಕೊಳ್ಳುವಂತೆ ಸೂಚಿಸಿದೆ. ಅಷ್ಟೇ ಅಲ್ಲ ಉಳಿದ ಮೊತ್ತಕ್ಕೆ ಸ್ವಂತ ಸಂಪನ್ಮೂಲ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ.
ಪ್ರಸಕ್ತ ವರ್ಷ ಶಾಲಾ- ಕಾಲೇಜುಗಳು ಆರಂಭವಾದಲ್ಲಿ, ಉಚಿತ ಅಥವಾ ರಿಯಾಯಿತಿ ಬಸ್ಪಾಸ್ಗಳನ್ನು ವಿತರಿಸಿದರೆ ಅದರ ಮೊತ್ತವನ್ನು ವಿದ್ಯಾರ್ಥಿ ಅಥವಾ ಸಂಸ್ಥೆಯಿಂದಲೇ ಭರಿಸುವಂತೆ ಸೂಚಿಸಿದ್ದು, ಸರ್ಕಾರದಿಂದ ಯಾವುದೇ ಸಹಾಯಧನ ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ತಾವು ಹೊರಡಿಸಿರುವ ಆದೇಶದಲ್ಲಿ ಇತರ ಬಸ್ ಪಾಸ್ ರಿಯಾಯಿತಿಯನ್ನು ಕೂಡ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಬ್ಬಂದಿಗಳಿಗೆ ವೇತನ ನೀಡಲು ಪರದಾಡುತ್ತಿರುವ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮೊತ್ತವನ್ನು ಭರಿಸಲಿದೇ ಎಂಬುದಕ್ಕೆ ಉತ್ತರ ಕಂಡುಕೊಳ್ಳುವುದು ಯಕ್ಷ ಪ್ರಶ್ನೆಯೇನಲ್ಲ. ಹೀಗಾಗಿ ಈ ಬಾರಿ ಶಾಲಾ-ಕಾಲೇಜುಗಳು ಪುನರಾರಂಭವಾದರೆ ರಿಯಾಯ್ತಿ ಬಸ್-ಪಾಸ್ಗಳು ಇರುವ ಸಾಧ್ಯತೆ ಅತ್ಯಂತ ಕಡಿಮೆ.