ಈಶ್ವರಪ್ಪ ರಾಜೀನಾಮೆ ಕೇಳುವವರಿಗೆ ನಾಚಿಕೆಯಾಗಬೇಕು – M P ರೇಣುಕಾಚಾರ್ಯ
ಕೆ ಎಸ್ ಈಶ್ವರಪ್ಪ ಅವರನ್ನ ರಾಜೀನಾಮೆ ಕೇಳುವವರಿಗೆ ನಾಚಿಕೆಯಾಗಬೇಕು ಎಂದು ಸಿ ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ. ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಗೆ ಯಾವುದೇ ವಿಷಯ ಸಿಗದೇ ಇದ್ದದ್ದಕ್ಕೆ ಈ ರೀತಿ ಈಶ್ವರಪ್ಪ ವಿರುದ್ಧ ಹೋರಾಟ ಮಾಡುತಿದ್ದಾರೆ ಎಂದು ಸರಣಿ ಟ್ವಿಟ್ ಮಾಡಿ ವಿರೋಧ ಪಕ್ಷಗಳ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಅರ್ಕಾವತಿ ರಿಡೋ, BDA, BBMP, ಪಾವಗಡ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಹತ್ತು ಹಲವು. ಸ್ವತಃ ನಿಮ್ಮ ಪಕ್ಷದ ಕಚೇರಿಯಲ್ಲೇ “ಪರ್ಸೆಂಟ್ ಜ್ ಜನಕನ” ಅಸಲಿ ಬಣ್ಣವನ್ನು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಇಬ್ಬರು ಬಟಾಬಯಲು ಮಾಡಿದ್ದರು. ಒಬ್ಬರಿಗೆ ಪಕ್ಷದಿಂದ ಉಚ್ಚಾಟನೆ ಮತ್ತೊಬ್ಬರಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನ.
ನಿಮ್ಮ ತಟ್ಟೆಯಲ್ಲಿ ಸತ್ತು ಹೆಗ್ಗಣವೇ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದ್ದನ್ನು ನೋಡಿ ನಗಬೇಡಿ. ಕಾಲಚಕ್ರ ಉರುಳಲೇಬೇಕು.!
ಕಾಂಗ್ರೆಸ್ ಪಕ್ಷದ ನಾಯಕರುಗಳೇ ದೂರುದಾರರು, ತನಿಖಾಧಿಕಾರಿಗಳು, ವಿಚಾರಣಾಧಿಕಾರಿಗಳು, ನ್ಯಾಯಾಧೀಶರು ಆಗುವುದು ಬೇಡ. ನಮ್ಮ ಸರ್ಕಾರ ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸಲು ಸಿದ್ದವಿದೆ. ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ನಿಮ್ಮ ಕಾಲದಲ್ಲಿ ಭ್ರಷ್ಟಾಚಾರದ ಗಂಗೋತ್ರಿಯೇ ಹರಿದಾಡಿತ್ತು ಎಂಬುದನ್ನು ಮರೆಯಬೇಡಿ.
DYSP ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಅಂದಿನ ಗೃಹ ಸಚಿವ ಕೆ.ಜೆ.ಜಾಜ್೯ ರನ್ನು ಬಂಧಿಸಿ ವಿಚಾರಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸೂಚನೆ ಅನುಮತಿ ಕೊಟ್ಟಿದ್ದರೆ ನಿಮ್ಮ ಆಹೋರಾತ್ರಿ ಕಪಟ ನಾಟಕದ ಧರಣಿಗೆ ಅರ್ಥ ಬರುತ್ತಿತ್ತು ಅಲ್ಲವೇ ಮಾನ್ಯ KPCC ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರೆ
ಮಾನ್ಯ ಜಾಜ್೯ ಅವರು ಆರೋಪಿ ಸ್ಥಾನದಲ್ಲಿದ್ದಾಗ ಸಿಬಿಐ ಅವರನ್ನು ಬಂಧಿಸಿತ್ತೇ.? ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಎಪ್ ಐ ಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಆದೇಶ ಕೊಟ್ಟ ನಂತರವೇ ಎಂಬುದನ್ನು ಮಾನ್ಯ ಸಿದ್ದರಾಮಯ್ಯನವರೇ ಜನತೆ ಮುಂದೆ ಬಾಯಿ ಬಿಡಿ.
ಕೆ.ಜೆ.ಜಾಜ್೯ ವಿರುದ್ದವೂ IPC Section 306 ( abetment of suicide ) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆಯೇ ಮೇಲೆ ದೂರು ದಾಖಲಾಗಿತ್ತು. ಆವಾಗ ಪೊಲೀಸರು ಏಕೆ ಬಂಧನ ಮಾಡಿರಲಿಲ್ಲ.?
ಮಾನ್ಯ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ” ಆ ಮಹಾನ್ ನಾಯಕ ” ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು! ಅಧಿಕಾರದ ಹಪಾಹಪಿತನಕ್ಕೆ ಬಿದ್ದಿರುವ “ಬಂಡೆ” ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರಳಾದರೂ ಅಚ್ಚರಿಯಿಲ್ಲ. ಬೇಗ ಎಚ್ಚೆತ್ತುಕೊಳ್ಳಿ ಸಿದ್ದರಾಮಯ್ಯರೇ! 2023 ರ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವೇ ಪ್ರಬಲ ಸ್ಪರ್ಧೆ. ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು. ಅಧಿಕಾರಕ್ಕಾಗಿ ಏನನ್ನೂ ಮಾಡದೆ ಬಿಡುವವರಲ್ಲ ” ಸ್ವಯಂಘೋಷಿತ ಡೈನಾಮಿಕ್ ಬಂಡೆ”
ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು ” ವ್ಯವಸ್ಥಿತ ಜಾಲ” ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ. ಹಗಲು ಕಂಡು ಇರಳಿನಲ್ಲಿ ಬಾವಿಗೆ ಬೀಳಬೇಡಿ ಸಿದ್ದರಾಮಯ್ಯ ನವರೇ! ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುದನ್ನು ” ಬಂಡೆಯ ” ಇತಿಹಾಸವೇ ಹೇಳುತ್ತದೆ. ಎಂದು ಸಿ ಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.