ಬೆಂಗಳೂರು: ಭಾರತೀಯ ಸಂವಿಧಾನವನ್ನು ಏಕಾಏಕಿ ಬದಲಾಯಿಸುವುದು ಅಸಾಧ್ಯ ಎಂದು ಅರಿತ ದುಷ್ಟಶಕ್ತಿಗಳು, ಅದನ್ನು ಒಳಗಿನಿಂದಲೇ ನಿಧಾನವಾಗಿ ದುರ್ಬಲಗೊಳಿಸುವ ಮೂಲಕ ಸಂವಿಧಾನಕ್ಕೆ ನಿಧಾನಗತಿಯ ವಿಷ (Slow Poison) ಉಣಿಸುವ ಗಂಭೀರ ಸಂಚು ನಡೆಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾಡಿನ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಂದೇಶ ರವಾನಿಸಿದ ಅವರು, ಸಂವಿಧಾನ ವಿರೋಧಿಗಳ ಗುಪ್ತ ಕಾರ್ಯಸೂಚಿ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಆತಂಕಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಸಂವಿಧಾನದ ಬದಲಾವಣೆ ಸುಲಭದ ಮಾತಲ್ಲ ಎಂದು ಅರ್ಥಮಾಡಿಕೊಂಡಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಹತ್ತಿಕ್ಕುವ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ನೇರವಾಗಿಯೇ ಆರೋಪಿಸಿದ್ದಾರೆ.
ಸಾಮಾಜಿಕ ನ್ಯಾಯದ ವಿರೋಧಿಗಳೇ ಸಂವಿಧಾನದ ವೈರಿಗಳು
ಸಂವಿಧಾನವನ್ನು ವಿರೋಧಿಸುವವರು ಕೇವಲ ಕಾನೂನಿನ ವಿರೋಧಿಗಳಲ್ಲ, ಅವರು ಮೂಲತಃ ಸಾಮಾಜಿಕ ಬದಲಾವಣೆ ಮತ್ತು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಡವರು, ರೈತರು, ಕಾರ್ಮಿಕರು, ದಲಿತರು ಮತ್ತು ಶೋಷಿತರ ಪರವಾದ ಕಾನೂನುಗಳು ಜಾರಿಯಾಗಬಾರದು ಎನ್ನುವ ಮನಸ್ಥಿತಿಯವರೇ ಇಂದು ಸಂವಿಧಾನದ ಮೇಲೆ ಪರೋಕ್ಷ ದಾಳಿ ನಡೆಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಅರ್ಪಿಸಿದ ಕಾಲದಿಂದಲೂ ಈ ವಿರೋಧವಿತ್ತು, ಈಗಲೂ ಆಗಾಗ ಸಂವಿಧಾನ ಕಿತ್ತೊಗೆಯುವ ಕೂಗುಗಳು ಕೇಳಿಬರುತ್ತಿವೆ. ಇಂತಹವರ ಬಗ್ಗೆ ನಾವು ಸದಾ ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಜಾರಿಯಾಗುವ ಮೊದಲು ಮನುಷ್ಯ ವಿರೋಧಿಯಾದ ಅಲಿಖಿತ ಸಂವಿಧಾನವೊಂದು ಜಾರಿಯಲ್ಲಿತ್ತು. ಅದು ಜಾತಿ ಮತ್ತು ಲಿಂಗದ ಆಧಾರದ ಮೇಲೆ ಮನುಷ್ಯನ ಯೋಗ್ಯತೆಯನ್ನು ಅಳೆಯುತ್ತಿತ್ತು. ಶೂದ್ರರು, ಮಹಿಳೆಯರು ಮತ್ತು ಅಸ್ಪಶ್ಯರಿಗೆ ಸಂಪತ್ತು ಮತ್ತು ಜ್ಞಾನದ ಹಕ್ಕನ್ನು ನಿರಾಕರಿಸಲಾಗಿತ್ತು. ಆ ಅಮಾನವೀಯ ಪದ್ಧತಿಯನ್ನು ತಿರಸ್ಕರಿಸಿ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವ ಆಧುನಿಕ ಸಂವಿಧಾನವನ್ನು ನಮಗೆ ನೀಡಲಾಗಿದೆ. ಆದರೆ ಹಳೆಯ ಶ್ರೇಣಿಕೃತ ವ್ಯವಸ್ಥೆಯನ್ನು ಮತ್ತೆ ತರಲು ಹವಣಿಸುವವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ವಿಶ್ಲೇಷಿಸಿದರು.
ಬಸವಣ್ಣನವರೇ ಪ್ರಜಾಪ್ರಭುತ್ವದ ಹರಿಕಾರರು
ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, 800 ವರ್ಷಗಳ ಹಿಂದೆಯೇ ಬಸವಣ್ಣನವರ ಅನುಭವ ಮಂಟಪದ ಮೂಲಕ ಪ್ರಜಾರಾಜ್ಯದ ಕಲ್ಪನೆ ಮೂಡಿತ್ತು ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ತನ್ನ ಅಭಿಪ್ರಾಯ ಮಂಡಿಸಲು ಅಲ್ಲಿ ಅವಕಾಶವಿತ್ತು. ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂದೇ ಅಡಿಗಲ್ಲು ಹಾಕಲಾಗಿತ್ತು ಎಂಬ ಐತಿಹಾಸಿಕ ಸತ್ಯವನ್ನು ಅವರು ಮೆಲುಕು ಹಾಕಿದರು.
ಆರ್ಥಿಕ ಪ್ರಜಾಪ್ರಭುತ್ವವೇ ಸರ್ಕಾರದ ಗುರಿ
ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ದೇಶ ಉದ್ಧಾರವಾಗುವುದಿಲ್ಲ, ಆರ್ಥಿಕ ಪ್ರಜಾಪ್ರಭುತ್ವವೂ ಬೇಕು ಎಂಬ ಅಂಬೇಡ್ಕರ್ ಅವರ ಆಶಯವೇ ನಮ್ಮ ಸರ್ಕಾರದ ಮೂಲಮಂತ್ರವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಬಡತನ ಎನ್ನುವುದು ಅಪರಾಧವಲ್ಲ, ಅದು ಸಂಪತ್ತಿನ ಅಸಮಾನ ಹಂಚಿಕೆಯ ಫಲ. ಈ ಅಸಮಾನತೆಯನ್ನು ಹೋಗಲಾಡಿಸಿ ಸಂಪತ್ತಿನ ಮರುಹಂಚಿಕೆ ಮಾಡುವುದೇ ಸಂವಿಧಾನದ ಆಶಯವಾಗಿದೆ.
ಗ್ಯಾರಂಟಿ ಯೋಜನೆಗಳು ಸಂವಿಧಾನ ಬದ್ಧ ಕರ್ತವ್ಯ
ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಸಿಎಂ, ಇವು ಕೇವಲ ಯೋಜನೆಗಳಲ್ಲ, ಸಂವಿಧಾನ ಬದ್ಧ ಕರ್ತವ್ಯಗಳು ಎಂದು ಬಣ್ಣಿಸಿದರು. ಹಸಿವು, ಅನಕ್ಷರತೆ ಮತ್ತು ಬಡತನದಿಂದ ಮುಕ್ತವಾದ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿ. ಇಂದು ಸರ್ಕಾರದ ಐದು ಗ್ಯಾರಂಟಿಗಳಿಂದಾಗಿ ಬಡ ಕುಟುಂಬಗಳಿಗೆ ವಾರ್ಷಿಕ 60 ರಿಂದ 70 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ಮಧ್ಯಮ ವರ್ಗದವರಿಗೂ ವಾರ್ಷಿಕ 25 ರಿಂದ 30 ಸಾವಿರ ಲಾಭವಾಗುತ್ತಿದೆ. ಈ ಹಣ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಬಳಕೆಯಾಗುತ್ತಿದ್ದು, ಜನರಲ್ಲಿ ಬದುಕಿನ ಭದ್ರತೆಯ ಭಾವನೆ ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ದೇಶ ಸುಭದ್ರವಾಗಿ ಉಳಿಯಲು ನಾವೆಲ್ಲರೂ ಸಂವಿಧಾನದ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.








