ಹೊಸದಿಲ್ಲಿ, ಮೇ 16 : ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು ಮತ್ತು ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿ ಇರುವವರನ್ನು ಆರ್.ಟಿ-ಪಿಸಿಆರ್ ಆಧಾರಿತ ಸ್ಯಾಂಪಲ್ ಪೂಲಿಂಗ್ ಮೂಲಕ ಒಂದೇ ಬಾರಿಗೆ ಕೊರೋನಾ ಸೋಂಕಿನ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇಲ್ಲಿಯವರೆಗೆ ಕೊರೊನಾ ಸೋಂಕು ಪತ್ತೆಯಾಗದ ಹಸಿರು ವಲಯಗಳಲ್ಲಿ ಮತ್ತು ಕಳೆದ 21 ದಿನಗಳಿಂದ ಹೊಸ ಕೊರೊನಾ ಪ್ರಕರಣ ಪತ್ತೆಯಾಗದ ಪ್ರದೇಶಗಳಲ್ಲಿ ಕೂಡ ಇದೇ ಪರೀಕ್ಷಾ ವಿಧಾನ ನಡೆಸಲು ನಿರ್ಧರಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸಾಮೂಹಿಕ ಪರೀಕ್ಷೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕ್ವಾರಂಟೈನ್ ನಲ್ಲಿರುವ ಕಾರ್ಮಿಕರು, ವಿದೇಶದಿಂದ ವಾಪಸಾದವರು ಮತ್ತು ಹಸಿರು ವಲಯಗಳಲ್ಲಿ ಇರುವ ಜನರಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷೆ ನಡೆಯುವ ವಿಧಾನ…
ಮೊದಲು 25 ಜನರ ತಂಡವನ್ನು ಮಾಡಿ, ಅವರ ಗಂಟಲು ದ್ರವದ ಮಾದರಿ ಸಂಗ್ರಹ.
ತಂಡದ ಪ್ರತಿಯೊಬ್ಬರ ಹೆಸರು, ಲಿಂಗ, ವಯಸ್ಸು, ಮಾದರಿ ಗುರುತಿನ ಸಂಖ್ಯೆಯನ್ನು ಬರೆದುಕೊಳ್ಳುವುದು.
ಮೂರು ಪದರಗಳ ಪ್ಯಾಕೇಜಿಂಗ್ ನಲ್ಲಿ ತಂಡದ ಗಂಟಲು ದ್ರವದ ಮಾದರಿಯನ್ನು ಪ್ಯಾಕ್ ಮಾಡಿ, ನಿಗದಿತ ಪ್ರಯೋಗಾಲಯಕ್ಕೆ ಕಳುಹಿಸುವುದು.
ಆರ್.ಟಿ-ಪಿಸಿಆರ್ ವಿಧಾನದ ಮೂಲಕ ಸ್ಯಾಂಪಲ್ ಪರೀಕ್ಷೆ ನಡೆಸಿ, 24 ಗಂಟೆಗಳೊಳಗೆ ಅದರ ವರದಿಯನ್ನು ಸಂಬಂಧ ಪಟ್ಟ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವುದು.
ಸಾಮೂಹಿಕ ಸ್ಯಾಂಪಲ್ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಪಕ್ಷದಲ್ಲಿ, ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಇಟ್ಟಿರುವ ಪ್ರತಿಯೊಬ್ಬರ ಗಂಟಲ ದ್ರವ ಮಾದರಿಯನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸುವುದು. ಈ ಮೂಲಕ ಸೋಂಕು ತಗುಲಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವುದು.








