ಮಕ್ಕಳ ಮನೆ ಬಾಗಿಲಿಗೆ ಪಠ್ಯ ಪುಸ್ತಕ ತಲುಪಿಸಲು ಚಿಂತನೆ
ಬೆಂಗಳೂರು, ಜುಲೈ 2: ರಾಜ್ಯದಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಇನ್ನೂ ದಿನ ನಿಗದಿಯಾಗದ ಹಿನ್ನಲೆಯಲ್ಲಿ ಮಕ್ಕಳ ಮನೆ ಬಾಗಿಲಿಗೆ ಪಠ್ಯ ಪುಸ್ತಕ ತಲುಪಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ವರ್ಷ ಜೂನ್ ಕೊನೆಯಲ್ಲಿ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದ ಸರ್ಕಾರ ಈಗಾಗಲೇ ಶೇಕಡಾ 70 ರಷ್ಟು ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಿದೆ. ಆದರೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಇನ್ನೂ ಶಾಲಾರಂಭದ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭವಾಗುವ ವರೆಗೆ ಮಕ್ಕಳು ಮನೆಯಲ್ಲೇ ಪಠ್ಯ ಪುಸ್ತಕಗಳನ್ನು ಓದಿಕೊಳ್ಳಲಿ ಎನ್ನುವ ನಿಟ್ಟಿನಲ್ಲಿ ಮಕ್ಕಳ ಮನೆ ಬಾಗಿಲಿಗೆ ಪುಸ್ತಕ ತಲುಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ಈಗಾಗಲೇ ಖಾಸಗಿ ಶಾಲೆಗಳು ಹಣ ಪಾವತಿಸಿರುವ ಹಿನ್ನಲೆಯಲ್ಲಿ ಪಠ್ಯಪುಸ್ತಕಗಳನ್ನು ರವಾನಿಸಿದ್ದು, ಸರ್ಕಾರಿ ಶಾಲೆಗಳಿಗೆ ಇನ್ನೂ ಪುಸ್ತಕ ವಿತರಣೆ ಪ್ರಾರಂಭವಾಗಿಲ್ಲ.








