ಕರ್ನಾಟಕದಲ್ಲಿ ಹಿಜಾಬ್ ಕುರಿತ ವಿವಾದ – ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ಪ್ರತಿಭಟನೆ..
ಕರ್ನಾಟಕದ ಕೆಲವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ, ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ಗುರುವಾರ ಸಾವಿರಾರು ಮುಸ್ಲೀಂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
‘ಜಾಮಿಯೆತ್ ಉಲೇಮಾ ಇ ಹಿಂದ್’ ಎಂಬ ಸಂಘಟನೆ ಈ ಪ್ರತಿಭಟನೆಯನ್ನು ಆಯೋಜಿಸಿದ್ದು, ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ‘ಹಿಜಾಬ್ ನಮ್ಮ ಹಕ್ಕು, ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯಿರಿ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಾಲೆಗಾಂವ್ನಲ್ಲಿ ಫೆಬ್ರವರಿ 11 ರ ಶುಕ್ರವಾರವನ್ನು ‘ಹಿಜಾಬ್ ದಿನ’ ಎಂದು ಆಚರಿಸುವುದಾಗಿ ಅವರು ಘೋಷಿಸಿದ್ದಾರೆ.
ಪೊಲೀಸರ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಕಾರಣ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಜಮೀತ್ ಉಲೇಮಾ ಇ ಹಿಂದ್ನ ನಾಲ್ವರು ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆಗೆ ಹೋಗಿ ಭಾಷಣ ಮಾಡಿದ ಆರೋಪದ ಮೇಲೆ ಸ್ಥಳೀಯ ಎಐಎಂಐಎಂ ಶಾಸಕರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದವು ಜನವರಿ 1, 2022 ರಂದು ಪ್ರಾರಂಭವಾಯಿತು, ಉಡುಪಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ಶಾಲಾ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರಿಂದ ಅವರಿಗೆ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.
ಅಂದಿನಿಂದ, ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಬಂದ ಅನೇಕ ಘಟನೆಗಳು ಕರ್ನಾಟಕದಾದ್ಯಂತ ನಡೆದಿವೆ ಮತ್ತು ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆಯ ಸಂಕೇತವಾಗಿ ಕೇಸರಿ ಶಾಲುಗಳನ್ನು ಧರಿಸಲು ಪ್ರಾರಂಭಿಸಿದರು. ಈ ವಾರದ ಆರಂಭದಲ್ಲಿ ಘರ್ಷಣೆಗಳು ಹಿಂಸಾಚಾರಕ್ಕೆ ತಿರುಗಿದವು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಗುರುವಾರ ಹಿಜಾಬ್ ಧರಿಸುವುದರ ಮೇಲಿನ ನಿರ್ಬಂಧಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಫೆಬ್ರುವರಿ 14ರ ಸೋಮವಾರದಂದು ಮತ್ತೊಮ್ಮೆ ವಿಚಾರಣೆ ನಡೆಸಲು ಪೀಠವು ನಿರ್ಧರಿಸಿತು ಮತ್ತು ವಿಷಯವು ನ್ಯಾಯಾಲಯದಲ್ಲಿ ಬಾಕಿ ಇರುವವರೆಗೆ ಯಾವುದೇ ಧಾರ್ಮಿಕ ವಸ್ತ್ರಗಳನ್ನು ಧರಿಸದಂತೆ ಆದೇಶಿಸಿದೆ.