ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ನಾವೇ ಕಾರಣ ಎಂದು ಹೇಳಿಕೊಳ್ಳುತ್ತಿರುವ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಗೆ ಸಚಿವ ಸಿ.ಟಿ ರವಿ ಕುಟುಕಿದ್ದಾರೆ. ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಕಟ್ಟಿದವರು, ಸರ್ಕಾರ ಬರಲು ಕಾರಣರಾದವರು ಇಬ್ಬರನ್ನು ಪರಿಗಣಿಸುತ್ತೇವೆ. ಸರ್ಕಾರ ಬರುವವರನ್ನೇ ಹೆಚ್ಚು ಪರಿಗಣಿಸಿದ್ರೆ, ಪಕ್ಷ ಕಟ್ಟಿದವರು ಸಿಟ್ಟಿಗೇಳ್ತಾರೆ. ಸರ್ಕಾರ ಬರುವುದಕ್ಕೆ ನಾವು ಕಾರಣ ಅಂತಾ ಹಲವು ಜನರು ಪರೋಕ್ಷವಾಗಿ ಹೇಳುತ್ತಿದ್ದಾರೆ. ಗೆಲುವಿಗೆ ಸಾವಿರಾರು ಅಪ್ಪ-ಅಮ್ಮಂದಿರು ಎಂದು ಪರೋಕ್ಷವಾಗಿ ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರಿಗೆ ಕುಟುಕಿದರು.
ಸದ್ಯ ನಾನು ರಾಜ್ಯಾಧ್ಯಕ್ಷರ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ರಾಷ್ಟ್ರೀಯ ನಾಯಕರ ಭಾವನೆಗಳನ್ನು ಅರ್ಥಮಾಡಿಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಹಿಂದಿನ ಅನುಭವವನ್ನು ಅರ್ಥಮಾಡಿಕೊಂಡು ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ ಎಂದರು.
ಇನ್ನು ಇದೇ ವೇಳೆ ಜಿಮ್ ತೆರೆಯುವ ಬಗ್ಗೆ ಮಾತನಾಡಿದ, ಜಿಮ್, ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ನಾವು ಸಿದ್ಧರಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇನ್ನು ಅನುಮತಿಯನ್ನು ಕೊಟ್ಟಿಲ್ಲ. ಕೇಂದ್ರ ಹೊಸ ಮಾರ್ಗಸೂಚಿಯಲ್ಲಿ ಅನುಮತಿ ಕೊಟ್ಟರೆ ನಮ್ಮ ರಾಜ್ಯದಲ್ಲಿ ಓಪನ್ ಮಾಡುತ್ತೇವೆ ಎಂದು ತಿಳಿಸಿದರು.








