ಮುಂಬಯಿ: ಸಿಎಂ ಸ್ಥಾನದಿಂದ 10 ದಿನದೊಳಗೆ ಕೆಳಗೆ ಇಳಿಯದಿದ್ದರೆ, ಬಾಬಾ ಸಿದ್ದಿಕಿಯಂತೆ ಹತ್ಯೆ ಮಾಡುವುದಾಗಿ ಉತ್ತರ ಪ್ರದೇಶದ (Uttar Pradesh) ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಬೆದರಿಕೆ ಕರೆ ಬಂದಿದೆ.
ಸದ್ಯ ಈ ಬೆದರಿಕೆ ಸಂದೇಶ ಕಳುಹಿಸಿದ ಮಹಿಳೆಯನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬಯಿ ಟ್ರಾಫಿಕ್ ಪೊಲೀಸ್ ನಿಯಂತ್ರಣ ಕೊಠಡಿಯ ವಾಟ್ಸಪ್ ಸಹಾಯವಾಣಿ ಸಂಖ್ಯೆಗೆ ಶನಿವಾರ ಸಂಜೆ ಅಪರಿಚಿತ ನಂಬರ್ ನಿಂದ ಜೀವ ಬೆದರಿಕೆ ಸಂದೇಶ ಬಂದಿತ್ತು. ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕಿಯಂತೆ ಹತ್ಯೆ ಮಾಡಲಾಗುವುದು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆಯ ಸರಮಾಲೆಯ ನಡುವೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿಗೂ ಬೆದರಿಕೆ ಬಂದಿದೆ. ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ ಅವರನ್ನು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.