ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಪೋಟ – 3 ಮಕ್ಕಳಿಗೆ ಗಾಯ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬರ್ಹಾಂಪೋರ್ನಲ್ಲಿ ಶನಿವಾರ 11 ರಿಂದ 14 ವರ್ಷದೊಳಗಿನ ಮೂವರು ಬಾಲಕರು ಕಚ್ಚಾ ಬಾಂಬ್ ಅನ್ನು ಚೆಂಡು ಎಂದು ಭಾವಿಸಿ ಅದರಲ್ಲಿ ಆಟ ಆಡುವಾಗ ಸ್ಪೋಟಗೊಂಡು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನ ಮಾಮುನ್ ಅಲಿ, 11, ಆಶಿಕ್ ಶೇಖ್, 14 ಮತ್ತು ಜ್ಯುವೆಲ್ ಶೇಖ್, 12 ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಮಾಮುಮ್ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಕೋಲ್ಕತ್ತಾದ ಆಸ್ಪತ್ರೆಗೆ ಕಳುಹಿಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಮೂವರು ಬಾಲಕರು ಮೈದಾನವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸೂರ್ಯಕಾಂತಿ ಗಿಡಗಳಿಂದ ತುಂಬಿದ್ದ ಪಕ್ಕದ ಜಮೀನಿನಲ್ಲಿ ಬಿದ್ದಿದ್ದ ಬಾಲ್ ಹುಡುಕಲು ಹೋದಾಗ ಜಮೀನಿನಲ್ಲಿ ಬಿದ್ದಿದ್ದ ಚೆಂಡಿನಂತಹ ವಸ್ತು ಕಾಣಿಸಿಕೊಂಡಿದೆ.
ಬಾಲ್ ಎಂದು ಭಾವಿಸಿ ಅದನ್ನು ಎಸೆದಾಡಿದಾಗ ಸ್ಫೋಟ ಸಂಭವಿಸಿದೆ. ಮೂವರಿಗೆ ಗಾಯಗಳಾಗಿವೆ.
ಆಸಿಫ್ ತಂದೆ ಮಿರ್ಜುವಾನ್ ಮೊಂಡಲ್, “ನನ್ನ ಮಗ ಕೆಲವು ಹುಡುಗರೊಂದಿಗೆ ಮೈದಾನದಲ್ಲಿ ಆಡುತ್ತಿದ್ದ. ಸ್ಫೋಟದ ಸದ್ದು ಕೇಳಿ ಗದ್ದೆಗೆ ಧಾವಿಸಿದೆ. ಮೈದಾನದಲ್ಲಿ ಬಾಂಬ್ ಇಟ್ಟವರು ಯಾರು ಎಂದು ನನಗೆ ತಿಳಿದಿಲ್ಲ. ಎಂದು ಹೇಳಿದ್ದಾರೆ.
ಬರ್ಹಾಂಪುರ ಪುರಸಭೆ ಸೇರಿದಂತೆ ಮುರ್ಷಿದಾಬಾದ್ನಲ್ಲಿ ಕನಿಷ್ಠ ಏಳು ನಾಗರಿಕ ಸಂಸ್ಥೆಗಳಿಗೆ ಚುನಾವಣೆ ಬಾಕಿ ಉಳಿದಿದ್ದು, ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ರಾಜಕೀಯ ಪಕ್ಷಗಳ ಬೆಂಬಲಿತ ಗೂಂಡಾಗಳು ಚುನಾವಣೆಗೆ ಮುನ್ನ ಕಚ್ಚಾ ಬಾಂಬ್ಗಳನ್ನು ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.
“ಸ್ಫೋಟದಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಪ್ರಕರಣವನ್ನು ಪ್ರಾರಂಭಿಸಲಾಗಿದೆ ಮತ್ತು ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬೆರ್ಹಾಂಪೋರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








