ಬೆಂಗಳೂರಿನಲ್ಲಿ ಇಂದು ಮತ್ತೆ ಕೊರೊನಾ ಗೆ ಮೂರು ಬಲಿ
ಬೆಂಗಳೂರು, ಜೂನ್14 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ ಡೌನ್ ಸಡಿಲಿಕೆಗೊಂಡ ನಂತರ ಕೊರೊನಾ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದ್ದು ಜೊತೆಗೆ ಸಾವಿನ ಪ್ರಮಾಣದಲ್ಲಿ ಕೂಡ ಏರಿಕೆಯಾಗಿದೆ.
ಇಂದು ಕೂಡ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದು, ನಗರದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕಿಗೆ 81 ಮಂದಿ ಮೃತಪಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲಿ 80 ವರ್ಷದ ವೃದ್ಧೆ, 65 ವರ್ಷದ ವೃದ್ಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರೆ, ಮತ್ತೊಬ್ಬ 39 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೆ 648 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 319 ಸಕ್ರಿಯ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 290 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸ್ತುತ ನಗರದಲ್ಲಿ 11 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.