ಬೆಂಗಳೂರಲ್ಲಿ ಪುಂಡರ ಪುಂಡಾಟ : ಎ-1 ಆರೋಪಿ ಮುಜಾಮಿಲ್ ಪಾಶಾ ಬಂಧನ.. ಪೊಲೀಸರ ಫೈರಿಂಗ್‍ಗೆ ಮೂವರು ಬಲಿ..!
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಕಿಡಿಗೇಡಿಗಳ ದಾಂದಲೆ ಪ್ರಕರಣದಲ್ಲಿ ಮೂವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಶ್ರೀನಿವಾಸ್ ಮೂರ್ತಿ ಅವರ ಅಳಿಯ ನವೀನ್ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‍ಗೆ ಸಿಡಿದೆದ್ದ ಒಂದು ಸಮುದಾಯದ ಗುಂಪು ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ.
ಅಷ್ಟೇ ಅಲ್ಲ ಕಾವಲ್ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸ್ ಮೂರ್ತಿ ಮನೆ, ಕಚೇರಿಯನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಹಾಗೇ ಶಾಸಕರ ಮನೆಯ ಅಕ್ಕಪಕ್ಕದ ಮನೆ ಹಾಗೂ ವಾಹನಗಳಿಗೂ ಬೆಂಕಿ ಹಚ್ಚಿ ದಾಂದಲೆ ಮಾಡಿದ್ದಾರೆ. ಇನ್ನೊಂದೆಡೆ ಕೆ.ಜೆ. ಹಳ್ಳಿ – ಡಿಜೆ ಹಳ್ಳಿ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಗಲಭೆಯನ್ನು ಹತೋಟಿಗೆ ತರಲು ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್ ಮಾಡಿದ್ದಾರೆ.
ಘಟನೆಯಲ್ಲಿ 15ಕ್ಕೂ ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿದ್ದ ಸುಮಾರು 165 ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ಸಣ್ಣ ಗುಂಪು ಶಾಸಕರ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದರು. ಆನಂತರ ಸಾವಿರಾರು ಜನ ಸೇರಿ ದಾಂದಲೆ ಮಾಡಿದ್ದಾರೆ.
ದೊಣ್ಣೆ, ರಾಡ್, ಲಾಂಗ್ ಹಿಡಿದು ಗಲಾಟೆ ಮಾಡಿದ್ದ ಗಲಭೆಕೋರರು ಪೊಲೀಸರನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಮೊದಲು ಪೊಲೀಸರು ಆಶ್ರುವಾಯು ಪ್ರಯೋಗ ಮಾಡಿದ್ರು. ಆದ್ರೆ ಪರಿಸ್ಥಿತಿ ಕೈ ತಪ್ಪಿ ಹೋದಾಗ ಪೊಲೀಸರು ಗೋಲಿಬಾರ್ ಮಾಡಬೇಕಾಯ್ತು.
ಪ್ರಕರಣ ಪ್ರಮುಖ ಆರೋಪಿ ಮುಜಾಮಿಲ್ ಪಾಶಾ ಬಂಧನ
ಈ ನಡುವೆ, ಪ್ರಕರಣ ಎ-1 ಆರೋಪಿ ಎಸ್‍ಡಿಪಿಐ ಸಂಘಟನೆಯ ಸದಸ್ಯ ಮುಜಾಮಿಲ್ ಪಾಶಾನನ್ನು ಪೊಲೀಸರು ಬಂಧಿಸಿದ್ದಾರೆ. ಸಗಾಯಪುರಂ ವಾರ್ಡ್ ನಿಂದ ಚುನಾವಣೆಗೂ ಸ್ಪರ್ಧಿಸಿದ್ದ ಮುಜಾಮಿಲ್ ಪಾಶಾ ನನ್ನು ಎ-1 ಆರೋಪಿಯನ್ನಾಗಿಸಲಾಗಿದೆ. ಹಾಗೇ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿದ್ದ ಶಾಸಕ ಶ್ರೀನಿವಾಸ್ ಮೂರ್ತಿ ಅವರ ಅಳಿಯ ನವೀನ್ ನನ್ನು ಕೂಡ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್ ಸಿಎಂ ಬಿಎಸ್‍ವೈಗೆ ವರದಿ ಸಲ್ಲಿಸಿದ್ದಾರೆ. ಸಾರ್ವಜನಿಕ ಆಸ್ತಿ -ಪಾಸ್ತಿಗೆ ಹಾನಿಯಾಗಿದೆ ಎಂದು ವರದಿಯಲ್ಲಿ ಕಮಲ್ ಪಂತ್ ಉಲ್ಲೇಖಿಸಿದ್ದಾರೆ. ಇನ್ನು ಬೆಂಗಳೂರಿನದ್ಯಂತ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಈ ನಡುವೆ ನೂತನ ಪೊಲೀಸ್ ಆಯುಕ್ತ ಕಮಲ್ ಪಂತ್ ವಿರುದ್ಧ ಸಿಎಂ ಕೂಡ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ.








