ನವದೆಹಲಿ: ದೇಶದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆಸಿದ್ದು, ಇಂದು ಮೂವರನ್ನು ಬಲಿಪಡೆದುಕೊಂಡಿದೆ. ಕೇರಳ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೊರೊನಾಸುರನಿಗೆ ಮೂರು ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ವೈರಸ್’ಗೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಬಲಿಯಾದ ವ್ಯಕ್ತಿಯನ್ನು ಅಬ್ದುಲ್ ಅಜೀಜ್ ಎಂದು ಗುರ್ತಿಸಲಾಗಿದ್ದು, ಭಾನುವಾರವಷ್ಟೇ ಇವರಲ್ಲಿ ವೈರಸ್ ದೃಢಪಟ್ಟಿತ್ತು. ಇವರಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಇದರಂತೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ನಿವಾಸಿಯಾಗಿದ್ದ 40 ವರ್ಷದ ಮಹಿಳೆ ವೈರಸ್’ಗೆ ಬಲಿಯಾಗಿದ್ದು, ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಸೋಂಕಿಗೆ ಮೂವರು ಬಲಿಯಾಗಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಮಧ್ಯಪ್ರದೇಶದ ಇಂದೋರ್ ನಲ್ಲಿಯೂ ಈ ವೈರಸ್’ಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ಮಧ್ಯಪ್ರದೇಶದಲ್ಲಿ ವೈರಸ್’ಗೆ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.








