ಒಂದೇ ಸ್ಥಳದಲ್ಲಿದ್ದ 3 ಕಾಳಿಂಗ ಸರ್ಪಗಳ ರಕ್ಷಣೆ
ಕಾರವಾರ : ಒಂದೇ ದಿನದಲ್ಲಿ ಮೂರು ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅರಕ್ಷಣ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರು ಮಠ ಸಮೀಪ ನಡೆದಿದೆ.
ಒಂದು ಕಾಳಿಂಗ ಸರ್ಪ ಉಳ್ಳೂರು ಮಠ ಸಮೀಪ ಅಬ್ಬೊಳ್ಳಿಯ ರಾಮನಾಥ ನಾಯ್ಕ್ ಅವರ ಮನೆಯ ಬಾವಿಯಲ್ಲಿ ಕಾಣಿಸಿಕೊಂಡಿತ್ತು. ಈ ಮಾಹಿತಿ ದೊರೆತ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಅಲ್ಲದೇ ಅಬ್ಬೋಳಿಯ ರಾಮನಾಥ ನಾಯ್ಕ ಅವರ ಮನೆಯ ಬಾವಿಯಲ್ಲಿ ಕಾಳಿಂಗ ಸರ್ಪ ಬಿದ್ದಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿ, ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಬರುವುದರೊಳಗೆ ಅದೇ ಬಾವಿಯಲ್ಲಿ ಇನ್ನೊಂದು ಕಾಳಿಂಗ ಬಿದ್ದಿತ್ತು.
ಮತ್ತೆ ಸ್ಥಳಕ್ಕೆ ತೆರಳಿ ಬಾವಿಯಲ್ಲಿದ್ದ ಕಾಳಿಂಗವನ್ನು ರಕ್ಷಿಸಿ ಒಂದೆರಡು ಕಿ.ಮೀ ಕ್ರಮಿಸುವಷ್ಟರಲ್ಲಿ ಅದೇ ಮನೆಯ ಕರೆ ಪಕ್ಕದ ಕಾಂಪೌಡ್‌ನಲ್ಲಿ ಇನ್ನೊಂದು ಕಾಳಿಂಗ ಸರ್ಪವಿದೆ ಎಂದು ಜನರೆಲ್ಲಾ ಭಯಭೀತರಾಗಿ ಒಂದೆಡೆ ಸೇರಿದ್ದರು. ವಿಷಯ ತಿಳಿದ ನಂತರ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆ ಸಿಬ್ಬಂದಿ ಆ ಕಾಳಿಂಗವನ್ನು ರಕ್ಷಿಸಿ ಅರಣ್ಯದಲ್ಲಿ ಬಿಟ್ಟಿದ್ದಾರೆ.
3 ಕಾಳಿಂಗಗಳಲ್ಲಿ 2 ಗಂಡು ಹಾಗೂ ಒಂದು ಹೆಣ್ಣು. ಈ ಹಾವುಗಳು ಮಿಲನ ಕ್ರಿಯೆಯಲ್ಲಿ ತೊಡಗಲು ಆಗಮಿಸಿವೆ ಎಂದು ಅಂದಾಜಿಸಲಾಗಿದೆ.