ಚಿಕ್ಕಬಳ್ಳಾಪುರ : ವೀಕೆಂಡ್ ಮೋಜು ಮಸ್ತಿ ಮಾಡಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ರಾಧಿಕಾ(21), ಇಮ್ರಾನ್(21), ಪೂಜಾ(21) ಎಂದು ಗುರುತಿಸಲಾಗಿದೆ. ಮೂವರು ಸ್ನೇಹಿತರಾಗಿದ್ದು, ಬೆಂಗಳೂರಿನ ಸಾರಾಯಿಪಾಳ್ಯದ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರೆಲ್ಲ ಬಿ ಫಾರ್ಮ ವಿದ್ಯಾರ್ಥಿಗಳು ಎನ್ನಲಾಗಿದೆ.
ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಜಲಾಶಯಕ್ಕೆ ರಾಧಿಕಾ, ಇಮ್ರಾನ್, ಪೂಜಾ ಸೇರಿದಂತೆ ಒಟ್ಟು 6 ಜನ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಜಾಲಿಯಾಗಿ ಆಟವಾಡುತ್ತ, ತಂದಿದ್ದ ಡಿಎಸ್ಎಲ್ಆರ್ ಕ್ಯಾಮೆರಾ ಮೂಲಕ ಶೂಟ್ ಮಾಡಲು ಆರಂಭಿಸಿದ್ದಾರೆ. ಆದರೆ, ಪೂಜಾ ನೀರಿನ ಆಳಕ್ಕೆ ಹೋಗುತ್ತಿದ್ದಂತೆ ಮುಳುಗಿದ್ದಾರೆ. ಪೂಜಾಳನ್ನು ರಕ್ಷಿಸಲು ಹೋಗಿ ರಾಧಿಕಾ ಹಾಗೂ ಇಮ್ರಾನ್ ತೆರಳಿ ನೀರು ಪಾಲಾಗಿದ್ದಾರೆ.
ಪೂಜಾ, ರಾಧಿಕಾ ಹಾಗೂ ಇಮ್ರಾನ್ ನೀರಿನಲ್ಲಿ ಮುಳುಗಿ, ನಂತರ ವಿಕಾಶ್ ಕಿರುಚಾಡುತ್ತಿದ್ದ ಕಾರಣ ಚನ್ನರಾಜ್ ತಕ್ಷಣ ನೀರಿನಲ್ಲಿ ಆಚೆ ಬಂದು ಪಕ್ಕದ ತೋಟದ ಹತ್ತಿರ ಹೋಗಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ತಕ್ಷಣ ಸ್ಥಳಿಯ ರೈತರು ಬಂದು ವಿಕಾಶ್ನನ್ನು ರಕ್ಷಣೆ ಮಾಡಿದ್ದಾರೆ
ನಂತರ ಸ್ಥಳಕ್ಕೆ ಬಂದ ಚಿಕ್ಕಬಳ್ಲಾಪುರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯ ಮೀನುಗಾರರು, ಮೃತರ ಶವಗಳನ್ನು ಮೇಲೆ ತಂದು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿತ್ತು.








