ಕೊರೊನಾ ಸೋಂಕು ಲಕ್ಷಣದ ಪಟ್ಟಿಗೆ ಮತ್ತೆ ಮೂರು ಸೇರ್ಪಡೆ
ಹೊಸದಿಲ್ಲಿ, ಜೂನ್ 29: ಚೀನಾದಿಂದ ಉಗಮವಾದ ಕೊರೊನಾ ವೈರಸ್ ಸೋಂಕಿನ ಗುಣಲಕ್ಷಣಗಳ ಪಟ್ಟಿಗೆ ಇದೀಗ ಹೊಸದಾಗಿ ಮೂರು ಲಕ್ಷಣಗಳು ಸೇರಿಕೊಂಡಿವೆ. ಈ ಮೊದಲು 3ರಷ್ಟಿದ್ದ ಕೊರೊನಾ ಸೋಂಕಿನ ಲಕ್ಷಣಗಳ ಸಂಖ್ಯೆ ಬಳಿಕ 9ಕ್ಕೆ ಏರಿಕೆಯಾಗಿತ್ತು. ಇದೀಗ ಈ ಪಟ್ಟಿಗೆ ಮತ್ತೂ ಮೂರು ಹೊಸ ಲಕ್ಷಣಗಳು ಸೇರಿಕೊಂಡಿವೆ.
ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ತಲೆ ನೋವು, ರುಚಿ ಮತ್ತು ವಾಸನೆ ಗ್ರಹಿಕೆ ಇಲ್ಲದಿರುವುದು, ಗಂಟಲು ಉರಿ, ಆಯಾಸ, ಮೈ ಕೈ ನೋವು ಇವೆಲ್ಲವೂ ಕೊರೋನಾ ಸೋಂಕಿನ ಲಕ್ಷಣಗಳು ಎಂದು ಯುಎಸ್ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಈಗಾಗಲೇ ತಿಳಿಸಿದ್ದು, ಇದೀಗ ಹೊಸದಾಗಿ ಮೂಗು ಕಟ್ಟುವುದು ಮತ್ತು ಸೋರುವ ಮೂಗು, ವಾಕರಿಕೆ ಅಥವಾ ವಾಂತಿಯಾಗುವುದು, ಅತಿಸಾರ(ಭೇದಿ) ಈ ಮೂರು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಅದೂ ಕೂಡ ಕೊರೊನಾ ವೈರಾಣು ದೇಹದೊಳಗೆ ಸೇರಿರುವ ಲಕ್ಷಣ ಇರಬಹುದು ಎಂದು ಅಮೆರಿಕದ ಆರೋಗ್ಯ ರಕ್ಷಣಾ ಸಂಸ್ಥೆಗಳು ಹೇಳಿವೆ.
ಹಾಗೆಂದು ಎಲ್ಲರಿಗೂ ಒಂದೇ ತರಹದ ಲಕ್ಷಣಗಳು ಕಾಣಿಸಬೇಕೆಂದು ಇಲ್ಲ. ಜನರಿಂದ ಜನರಿಗೆ ಲಕ್ಷಣಗಳಲ್ಲಿ ವ್ಯತ್ಯಾಸವಿರಬಹುದು. ವೈರಾಣು ದೇಹ ಪ್ರವೇಶಿಸಿದ ಬಳಿಕ 2 ರಿಂದ 14 ದಿನಗಳು ಕೊರೊನಾ ಸೋಂಕು ಲಕ್ಷಣಗಳು ಗೋಚರಿಸಲು ಬೇಕಾಗಬಹುದು ಎಂದು ಸಿಡಿಸಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಯಾವುದಕ್ಕೂ ಮುನ್ನೆಚ್ಚರಿಕೆ ಇರಲಿ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಎಚ್ಚರಿಕೆ ನೀಡಿದೆ.
12 ಲಕ್ಷಣಗಳನ್ನೊಳಗೊಂಡ ಈ ಪಟ್ಟಿಯೇ ಅಂತಿಮವಲ್ಲ., ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನಗಳನ್ನು ನಡೆಸುತ್ತಿರುವ ಸಿಡಿಸಿ ಮುಂದಿನ ದಿನಗಳಲ್ಲಿ ಇದನ್ನು ಅಪ್ಡೇಟ್ ಮಾಡುತ್ತಲೇ ಇರುತ್ತದೆ ಎಂದೂ ಆರೋಗ್ಯ ರಕ್ಷಣಾ ಸಂಸ್ಥೆ ತಿಳಿಸಿದೆ.