ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಮತ್ತೆ ಮೂರು ಕೋವಿಡ್-19 ಪ್ರಕರಣಗಳು ಪತ್ತೆ
ಪುತ್ತೂರು, ಜುಲೈ 14: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 39 ವರ್ಷ ಪ್ರಾಯದ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ, 70 ವರ್ಷದ ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿ ಮತ್ತು 62 ವರ್ಷದ ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕಡಬದ 39 ವರ್ಷದ ಯುವಕ ಮಹಾರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದು ಆತನ ಸಹೋದ್ಯೋಗಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಆತನನ್ನು ಕೂಡಾ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಆತನಿಗೆ ಕೂಡ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
70 ವರ್ಷದ ಪುತ್ತೂರು ತಾಲೂಕಿನ ನಟ್ಟಿಬೈಲು ನಿವಾಸಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಂಗಳವಾರ ಇವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕದ 62 ವರ್ಷದ ವ್ಯಕ್ತಿಯೂ ಕೂಡಾ ಜ್ವರದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಇಲ್ಲಿಯವರೆಗೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 56 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ಇಬ್ಬರು ಕೊರೊನಾಕ್ಕೆ ಬಲಿಯಾಗಿದ್ದಾರೆ