ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು 3 ಸಹೋದರಿಯರ ಸಾವು….
ಚಿಕ್ಕಪ್ಪನ ಮದುವೆಗೆಂದು ಬಂದಿದ್ದ ಮಕ್ಕಳು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಅತ್ತಿಕಟ್ಟೆ ತಾಂಡ ದಲ್ಲಿ ನಡೆದಿದೆ.
ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನೀರು ಕುಡಿಯಲು ಹೋಗಿದ್ದ ಸಹೋದರಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಮೃತಪಟ್ಟ ಮಕ್ಕಳನ್ನ ಸುನೀತಾ(13), ಅಂಕಿತಾ(10) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(10) ಎಂದು ಗುರುತಿಸಲಾಸಗಿದೆ.
ಬಾಲಕಿಯರು ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ್ದರು. ನೀರಿನ ದಾಹ ನೀಗಿಸಿಕೊಳ್ಳಲು ಕೃಷಿ ಹೊಂಡಕ್ಕಿಳಿದಿದ್ದಾರೆ. ಆಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ತಂದೆ, ತಾಯಿ ಜೊತೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆ ಬಂದಿದ್ದರಂತೆ.
ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುಂಡರಗಿ ತಹಶೀಲ್ದಾರ ಆಶಪ್ಪ ಪೂಜಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನ ನಡೆಸಿದ್ದಾರೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.