ಹೈದರಾಬಾದ್: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ಎರಡನೇ ಪಂದ್ಯದಲ್ಲಿ ಅಭಿಮಾನಿಗಳಿಗೆ ರೋಚಕ ಅನುಭವ ಸಿಕ್ಕಿತು. ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯ ಟೈಬ್ರೇಕರ್ವರೆಗೂ ಸಾಗಿತು. ಈ ಟೈಬ್ರೇಕರ್ನಲ್ಲಿ ಪುಣೇರಿ ಪಲ್ಟನ್ ಜಯ ಸಾಧಿಸಿ ಶುಭಾರಂಭ ಮಾಡಿತು. ಬುಲ್ಸ್ ಟೂರ್ನಿಯಲ್ಲಿ ಮೊದಲು ಸೋಲು ಕಂಡಿದೆ.
ನಿಗದಿತ 40 ನಿಮಿಷಗಳ ಪಂದ್ಯದ ಅವಧಿಯಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಅಂತಿಮವಾಗಿ ಎರಡೂ ತಂಡಗಳು 32-32 ಅಂಕ ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಬುಲ್ಸ್ ಪರ ಸ್ಟಾರ್ ರೈಡರ್ ಆಕಾಶ್ ಶಿಂದೆ 12 ಅಂಕ ಗಳಿಸಿದರೆ, ಆಕಾಶ್ ಮಲಿಕ್ 8 ಅಂಕಗಳೊಂದಿಗೆ ಮಿಂಚಿದರು. ಪುಣೇರಿ ಪಲ್ಟನ್ ತಂಡವು ಉತ್ತಮ ರೇಡಿಂಗ್ ಮತ್ತು ಡಿಫೆಂಡಿಂಗ್ನೊಂದಿಗೆ ಸವಾಲು ಒಡ್ಡಿತು.
ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಸಮಬಲ ಪ್ರದರ್ಶನ ನೀಡಿದವು. ಪುಣೇರಿ 13 ಅಂಕ ಗಳಿಸಿದರೆ, ಬುಲ್ಸ್ ಕೂಡ 13 ಅಂಕ ಗಳಿಸಿತು. ನಂತರ ಎರಡನೇ ಅವಧಿಯಲ್ಲಿಯೂ ಇದೇ ರೀತಿಯ ಹೋರಾಟ ಮುಂದುವರಿಯಿತು. ಬೆಂಗಳೂರು ಮತ್ತು ಪುಣೇರಿ ತಲಾ 19 ಅಂಕಗಳನ್ನು ಗಳಿಸಿ ಮುನ್ನಡೆ ಸಾಧಿಸಿದವು. ಒಂದು ಹಂತದಲ್ಲಿ ಬುಲ್ಸ್ ಆಲ್ಔಟ್ ಭೀತಿ ಎದುರಿಸಿದರೆ, ಪುಣೇರಿ ಆಲ್ಔಟ್ನಿಂದ ಪಾರಾಯಿತು.
ತಲೈವಾಸ್ಗೆ ಮೊದಲ ಜಯ
ದಿನದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 38-35 ಅಂಕಗಳ ಅಂತರದಿಂದ ಸೋಲಿಸಿತು. ತಮಿಳ್ ತಲೈವಾಸ್ ಪರವಾಗಿ ಅರ್ಜುನ್ ದೇಶ್ವಾಲ್ (12) ಹಾಗೂ ಪವನ್ ಶೆರಾವತ್ (9) ಉತ್ತಮ ಪ್ರದರ್ಶನ ನೀಡಿದರೆ, ತೆಲುಗು ಟೈಟಾನ್ಸ್ ತಂಡದ ಭರತ್ 11 ಅಂಕಗಳನ್ನು ಗಳಿಸಿದರು.








