ಕ್ರಿಕೆಟ್ ದೇವ್ರನ್ನೇ ಔಟ್ ಮಾಡುತ್ತೀಯಾ ? ನಿನಗೆಷ್ಟು ಧೈರ್ಯ… ಅಂಪೈರ್ ಮತ್ತು ಬೌಲರ್ ಗೆ ಕೊಲೆ ಬೆದರಿಕೆಯಂತೆ…!
ಅದೊಂದು ಕಾಲವಿತ್ತು… ಅದು ಈಗ ನೆನಪು ಅಷ್ಟೇ.. ಆದ್ರೂ ಆ ಮೂರಕ್ಷರದ ಪದಕ್ಕೆ ಇರುವ ತಾಕತ್ತೇ ಬೇರೆಯದ್ದೇ ಬಿಡಿ. ಸಚಿನ್.. ಸಚಿನ್… ಸಚಿನ್… ಇದು ವಿಶ್ವದ ಯಾವುದೇ ಕ್ರೀಡಾಂಗಣವಿರಲಿ.. ಅಲ್ಲಿ ಮೊಳಗುತ್ತಿದ್ದ ಈ ಮೂರಕ್ಷರದ ಪದಗಳೇ… ಪ್ರೇಕ್ಷಕರ ಬಾಯಲ್ಲಿ ಮಂತ್ರಘೋಷದಂತೆ ಮೊಳಗುತ್ತಿತ್ತು. ಇದು ಈಗ ಕ್ರಿಕೆಟ್ ಚರಿತ್ರೆಯಲ್ಲಿ ಮುಗಿದು ಹೋದ ಅಧ್ಯಾಯವಾದ್ರೂ ಆಗೊಮ್ಮೆ.. ಹೀಗೊಮ್ಮೆ ಕೇಳಿಬರುತ್ತಿದೆ.
ಹೌದು, ಸಚಿನ್ ತೆಂಡುಲ್ಕರ್ ಅಂದ್ರೆ ಅದು ಸಚಿನ್ ತೆಂಡುಲ್ಕರ್.. ಕೆಲವರು ಸಚಿನ್ ತೆಂಡುಲ್ಕರ್ ದಾಖಲೆಗಳಿಗಾಗಿ ಆಡುವ ಕ್ರಿಕೆಟಿಗ ಅಂತ ಟೀಕೆ ಮಾಡುತ್ತಾರೆ. ಮತ್ತೆ ಕೆಲವರು ಕ್ರಿಕೆಟ್ ದೇವ್ರು ಪಟ್ಟ ಕಟ್ಟಿ ಆರಾಧನೆ ಮಾಡುತ್ತಿದ್ದರು. ಆದ್ರೆ ಸಚಿನ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ತನ್ನ ದೇಹ ಸ್ಪಂದಿಸುವ ತನಕ ಕ್ರಿಕೆಟ್ ಆಡಿದ್ದರು. ಇನ್ನು ಕ್ರಿಕೆಟ್ ಆಟವಾಡಿದ್ದು ಸಾಕು ಅಂತ ಅನ್ನಿಸಿದಾಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಹಾಗಂತ ನಾವು ಹೇಳಬಹುದು. ಆದ್ರೆ ಸಚಿನ್ ತೆಂಡುಲ್ಕರ್ ಒತ್ತಡಕ್ಕೆ ಮಣಿದು ಕ್ರಿಕೆಟ್‍ಗೆ ವಿದಾಯ ಹೇಳಿದ್ದರು ಎಂಬ ಮಾತು ಇದೆ. ಅದೇನೇ ಇರಲಿ, ಸಚಿನ್ 16ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಬಂದು 40ನೇ ವಯಸ್ಸಿನಲ್ಲಿ ಭಾರತ ತಂಡದಿಂದ ದೂರ ಸರಿದ್ರು. ಸುಮಾರು 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ನಲ್ಲಿ ಸಾರ್ವಭೌಮನಂತೆ ರಾಜ್ಯಭಾರ ಮಾಡಿದ್ದರು
ಅಂದ ಮೇಲೆ ಅಭಿಮಾನಿಗಳು ಸಚಿನ್ ಮೇಲೆ ಇಟ್ಟಿರುವ ಅಭಿಮಾನ ಎಂತಹುದ್ದು ಅಂತ ಊಹಿಸಿಕೊಳ್ಳಿ. ಸಚಿನ್ ರನ್ ಗಳಿಸಲಿ, ಗಳಿಸದೇ ಇರಲಿ, ಶತಕ ದಾಖಲಿಸಲಿ, ದಾಖಲಿಸದೇ ಇರಲಿ, ಆದ್ರೆ ಔಟ್ ಆಗಬಾರದು ಅಷ್ಟೇ. ಸಚಿನ್ ಆಡ್ತಾನೆ ಇರಬೇಕು ಎಂಬುದನ್ನು ಅವರ ಕಟ್ಟಾ ಅಭಿಮಾನಿಗಳ ಅಭಿಲಾಷೆಯಾಗಿತ್ತು. ಇದಕ್ಕೆ 1996ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಒಂದು ನಿದರ್ಶನವಷ್ಟೇ. ಸಚಿನ್ ಔಟಾದಾಗ ಏನೇನು ಆಯ್ತು ಎಂಬುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ.
ಇಂತಹ ಸಚಿನ್ ತೆಂಡುಲ್ಕರ್ ತನ್ನ ಕ್ರಿಕೆಟ್ ಬದುಕಿನ ಕೊನೆಯ ದಿನಗಳಲ್ಲಿ ಒಂದೇ ಒಂದು ಶತಕಕ್ಕಾಗಿ ಸಾಕಷ್ಟು ಒದ್ದಾಟ ನಡೆಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಶತಕ ದಾಖಲಿಸಲು ಸಾಕಷ್ಟು ಪರದಾಟ ನಡೆಸಿದ್ದರು. ಅದ್ರಲ್ಲೂ ಅವರ ಟೆಸ್ಟ್ ಕ್ರಿಕೆಟ್ ಬದುಕಿನಲ್ಲಿ 49 ಶತಕ ಸಿಡಿಸಿದ್ದಾರೆ. ಇನ್ನೊಂದು ಶತಕ ದಾಖಲಾಗುತ್ತಿದ್ರೆ ಭರ್ತಿ ಅರ್ಧಶತಕಗಳ ಶತಕವಾಗುತ್ತಿತ್ತು. ಆದ್ರೆ ಸಚಿನ್ ಮತ್ತು ಅವರ ಅಭಿಮಾನಿಗಳ ಆಸೆ ಈಡೇರಲಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ರೆ 2011ರಲ್ಲಿ ಇಂಗ್ಲೆಂಡ್‍ನ ಓವಲ್ ಮೈದಾನದಲ್ಲಿ ಸಚಿನ್ ಅವರ ಶತಕಗಳ ಶತಕ ಹಾಗೂ ಟೆಸ್ಟ್ ಕ್ರಿಕೆಟ್‍ನ ಅರ್ಧಶತಕದ ಶತಕ ದಾಖಲಾಗಬೇಕಿತ್ತು. ಆದ್ರೆ ಅಂಪೈರ್ ಅವರ ತೀರ್ಮಾನದಿಂದ ಸಚಿನ್ ಅಲ್ಲಿ ಶತಕ ವಂಚಿತರಾದ್ರು. 91 ರನ್ ಗಳಿಸಿದ್ದಾಗ ಸಚಿನ್ ಎಲ್‍ಬಿ ಬಲೆಗೆ ಬಿದ್ದಿದ್ದರು. ಆಗ ಡಿಆರ್‍ಎಸ್ ನಿಯಮವಿದ್ರೂ ಬಿಸಿಸಿಐ ಸಹಮತ ಸೂಚಿಸಿರಲಿಲ್ಲ. ಹೀಗಾಗಿ ಸಚಿನ್ ಅಂಪೈರ್ ತೀರ್ಮಾನಕ್ಕೆ ಬದ್ಧರಾಗಬೇಕಿತ್ತು.
ಅವತ್ತು ಸಚಿನ್ ಅವರನ್ನು ಔಟ್ ಮಾಡಿದ್ದ ಬೌಲರ್ ಫುಲ್ ಖುಷಿಯಾಗಿಬಿಟ್ಟಿದ್ದ. ಆದ್ರೆ ನಂತರ ಸಚಿನ್ ವಿಕೆಟ್ ಪಡೆದ ಬೌಲರ್ ಮತ್ತು ಅಂಪೈರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೊನೆಗೆ ತಮ್ಮ ಜೀವ ಉಳಿಸಿಕೊಳ್ಳಲು ಅವರು ಪೊಲೀಸ್ ಭದ್ರತೆಯನ್ನು ಪಡೆದುಕೊಳ್ಳಬೇಕಾಗಿತ್ತು. ಅಷ್ಟರ ಮಟ್ಟಿಗೆ ಸಚಿನ್ ಅಭಿಮಾನಿಗಳು ಆ ಬೌಲರ್ ಮತ್ತು ಅಂಪೈರ್‍ಗೆ ಕಾಟ ಕೊಟ್ಟಿದ್ರಂತೆ. ಹಾಗಂತ ಅದು ಕೇವಲ ಒಂದು ಮಾತಿನ ಧಮ್ಕಿ ಆಗಿರಲಿಲ್ಲ. ಬದಲಾಗಿ ಕೊಲೆ ಬೆದರಿಕೆಯಂತೆ. ಪ್ರಾಣ ತೆಗೆಯುತ್ತೇವೆ ಅಂದಾಗ ಅವರಿಬ್ಬರ ಮನಸ್ಥಿತಿ ಹೇಗಿಬಹುದು… ಅಷ್ಟರ ಮಟ್ಟಿಗೆ ಅಭಿಮಾನಿಗಳು ಸಚಿನ್ ತೆಂಡುಲ್ಕರ್ ಅವರನ್ನು ಆರಾಧಿಸುತ್ತಿದ್ದರು.
ಅಂದ ಹಾಗೇ ಸಚಿನ್ ಅವರನ್ನು ಅಂದು ಎಲ್‍ಬಿ ಬಲೆಗೆ ಬೀಳಿಸಿದ್ದ ಬೌಲರ್ ಇಂಗ್ಲೆಂಡ್‍ನ ಟಿಮ್ ಬ್ರೆಸ್ನನ್. ಬ್ರೆಸ್ನನ್ ಮನವಿಗೆ ಸ್ಪಂದಿಸಿದ್ದು ಆಸ್ಟ್ರೇಲಿಯಾದ ಅಂಪೈರ್ ರಾಡ್ ಟಕ್ಕರ್. ಅಂದಿನ ಘಟನೆಯನ್ನು ಇಂದು ನೆನಪು ಮಾಡಿಕೊಂಡು ಬಹಿರಂಗಗೊಳಿಸಿದ್ದು ಇಂಗ್ಲೆಂಡ್‍ನ ಬೌಲರ್ ಟಿಮ್ ಬ್ರೆಸ್ನನ್.
ಅದು 2011ರ ಓವೆಲ್ ಟೆಸ್ಟ್ ಪಂದ್ಯ. ಭಾರತ ಆಗಲೇ ಸರಣಿಯಲ್ಲಿ 0-3ರಿಂದ ಹಿನ್ನಡೆಯಲ್ಲಿತ್ತು. ಹಾಗೇ ಸಚಿನ್ ಅವರು 99 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದರು. ಇನ್ನು ಒಂದು ಶತಕ ದಾಖಲಿಸಿದ್ರೆ ಐತಿಹಾಸಿಕ ಸಾಧನೆಗೆ ಪಾತ್ರರಾಗಿರುತ್ತಿದ್ದರು. ಈ ಒಂದು ಶತಕಕ್ಕಾಗಿ ಸಚಿನ್ ಸಾಕಷ್ಟು ಪ್ರಯತ್ನ ಕೂಡ ಪಡುತ್ತಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಅವರಿಗೆ ಸಾಧ್ಯವಾಗಲಿಲ್ಲ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರು 91 ರನ್ ಗಳಿಸಿ ಶತಕದತ್ತ ದಾಪುಗಾಲು ಹಾಕುತ್ತಿದ್ದರು. ಆಗ ನನ್ನ ಎಸೆತದಲ್ಲಿ ಅವರನ್ನು ಎಲ್‍ಬಿ ಬಲೆಗೆ ಬೀಳಿಸುವಂತೆ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ್ದ ಅಂಪೈರ್ ರಾಡ್ ಟಕ್ಕರ್ ಅವರು ಔಟ್ ಅಂತ ತೀರ್ಪು ನೀಡಿದ್ದರು. ಆದ್ರೆ ಚೆಂಡು ಲೆಗ್ ಸ್ಟಂಪ್‍ನಿಂದ ಆಚೇಗೆ ಹೋಗುವ ಸಾಧ್ಯತೆಯೂ ಇತ್ತು. ಹಾಗಂತ ಅಂಪೈರ್ ತೀರ್ಮಾನವನ್ನು ಮರು ಪರಿಶೀಲಿಸುವಂತಿರಲಿಲ್ಲ. ಯಾಕಂದ್ರೆ ಬಿಸಿಸಿಐ ಡಿಆರ್‍ಎಸ್ ನಿಯಮಕ್ಕೆ ಸಹಮತ ಸೂಚಿಸಿರಲಿಲ್ಲ. ಹೀಗಾಗಿ ಸಚಿನ್‍ಗೆ ಅಂಪೈರ್ ತೀರ್ಮಾನವನ್ನು ರಿವ್ಯೂ ಮಾಡುವ ಅವಕಾಶವೇ ಇರಲಿಲ್ಲ ಅಂತ ಆ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ಟಿಮ್ ಬ್ರೆಸ್ನನ್.
ಒಂದು ವೇಳೆ ಸಚಿನ್ ಔಟಾಗದೇ ಇರುತ್ತಿದ್ರೆ ಅವರು ಶತಕ ದಾಖಲಿಸುತ್ತಿದ್ದರು. ಆದ್ರೆ ಆ ಸರಣಿಯನ್ನು ಗೆದ್ದ ಇಂಗ್ಲೆಂಡ್ ನಂಬರ್ ವನ್ ಟೆಸ್ಟ್ ತಂಡವಾಗಿ ಹೊರಹೊಮ್ಮಿತ್ತು. ಆದ್ರೆ ಆ ನಂತರ ನಡೆದ ಅವಾಂತರವನ್ನು ಮಾತ್ರ ಮರೆಯಲು ಸಾಧ್ಯವಿಲ್ಲ. ಅಂಪೈರ್ ಮತ್ತು ನನಗೆ ಕೊಲೆ ಬೆದರಿಕೆಗಳು ಬರಲು ಶುರುವಾದವು. ನನಗೆ ಟ್ವಿಟರ್ ನಲ್ಲಿ ಕೊಲೆ ಬೆದರಿಕೆಗಳು ಬರುತ್ತಿದ್ರೆ, ಅಂಪೈರ್ ಅವರ ಮನೆಯ ವಿಳಾಸಕ್ಕೆ ಕೊಲೆ ಬೆದರಿಕೆಯ ಪತ್ರಗಳು ಬರುತ್ತಿದ್ದವು. ಅವನನ್ನು ಔಟ್ ಮಾಡಲು ನಿನಗೆಷ್ಟು ಧೈರ್ಯ..? ನೀನು ಎಸೆದ ಚೆಂಡು ಲೆಗ್‍ಸ್ಟಂಪ್‍ನಿಂದ ಆಚೇಗೆ ಹೋಗುತ್ತಿತ್ತು. ನಿಮ್ಮನ್ನು ಸುಮ್ಮನೆ ಬಿಡಲ್ಲ ಅಂತೆಲ್ಲಾ ಪತ್ರಗಳು, ಟ್ವಿಟರ್‍ನಲ್ಲಿ ಸಂದೇಶಗಳು ಬರುತ್ತಿದ್ದವು. ಕೊನೆಗೆ ನಾವು ಪೊಲೀಸರ ಭದ್ರತೆಗೆ ಮೊರೆ ಹೋಗಬೇಕಾಯ್ತು ಎಂಬುದನ್ನು ಟಿಮ್ ಬ್ರೆಸ್ನನ್ ಹೇಳಿಕೊಂಡಿದ್ದಾರೆ.
\








