ಐಟಿ ರಿಟರ್ನ್ ಫೈಲ್ ಮಾಡಲು ನವೆಂಬರ್ 30ರವರೆಗೆ ಸಮಯಾವಕಾಶ
ನವದೆಹಲಿ, ಜುಲೈ 5: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಪಾವತಿಯ ಗಡುವನ್ನು ಮತ್ತೆ ವಿಸ್ತರಿಸಿದೆ. 2019-20ನೇ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಲು ನವೆಂಬರ್ 30ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಘೋಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ತೆರಿಗೆ ಪಾವತಿದಾರರಿಗೆ ಸಹಾಯವಾಗುವ ಆಶಯದೊಂದಿಗೆ ಈ ನಿರ್ಧಾರ ಕೈಗೊಂಡಿದ್ಧೇವೆ ಎಂದು ತಿಳಿಸಿದೆ. ಐಟಿ ಇಲಾಖೆಯು ಎರಡು ದಿನಗಳ ಹಿಂದೆ ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಇದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿ ಕ್ರಮ ಕೈಗೊಂಡಿತ್ತು.ಇದರಿಂದಾಗಿ ಹೂಡಿಕೆದಾರರು ಈ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ತೆರಿಗೆ ಕಡಿಮೆ ಮಾಡಿಕೊಳ್ಳ ಬಹುದಾಗಿದೆ. ಐಟಿ ರಿಟರ್ನ್ ಸಲ್ಲಿಕೆ ವೇಳೆ
ಹೂಡಿಕೆ ಮಾಡಿರುವುದನ್ನು ನಮೂದಿಸಿ ತೆರಿಗೆ ಹಣ ಕ್ಲೈಮ್ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಉಳಿತಾಯ ಯೋಜನೆಗೆ ಹೂಡಿಕೆ ಮಾಡುವ ಗಡುವು ಮತ್ತು ಐಟಿ ರಿಟರ್ನ್ ಫೈಲ್ ಮಾಡುವ ಗಡುವು ಎರಡೂ ಒಂದಕ್ಕೊಂದು ಪೂರಕವಾಗಿರುವಂತೆ ಐಟಿ ಇಲಾಖೆ ಗಮನ ಹರಿಸಿದೆ.
ಜೀವ ವಿಮೆ, ಪಿಪಿಎಫ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಇಎಲ್ಎಸ್ಎಸ್ ಇತ್ಯಾದಿ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಜನರು ತಮ್ಮ ಹಣವನ್ನು ಹೂಡಿಕೆ ಮಾಡಬಹುದಾಗಿದ್ದು, ಹೆಚ್ಚು ಆದಾಯ ಕೊಡದಿದ್ದರೂ ಕಡಿಮೆ ರಿಸ್ಕ್ ಹೊಂದಿರುವ ಈ ಉಳಿತಾಯ ಯೋಜನೆಗಳು ಸಾಕಷ್ಟು ಬೇಡಿಕೆ ಗಳಿಸಿದೆ. ಈ ತಿಂಗಳ ಅಂತ್ಯದವರೆಗೂ ಇದರಲ್ಲಿ ಹಣ ಹೂಡಲು ಜನರಿಗೆ ಐಟಿ ಇಲಾಖೆ ಅವಕಾಶ ನೀಡಿದೆ.
ಇದೇ ವೇಳೆ, ಐಟಿ ಇಲಾಖೆಯು ಟಿಡಿಎಸ್ ಅಥವಾ ಟಿಸಿಎಸ್ ಸರ್ಟಿಫಿಕೇಟ್ಗಳನ್ನ ಸಲ್ಲಿಸುವ ದಿನಾಂಕವನ್ನೂ ಜುಲೈ 31ಕ್ಕೆ ವಿಸ್ತರಿಸಿ ಕ್ರಮ ಕೈಗೊಂಡಿದೆ. ಟ್ಯಾಕ್ ಆಡಿಟ್ ವರದಿಯನ್ನು ಸಲ್ಲಿಸುವ ಅಂತಿಮ ಗಡು ಅಕ್ಟೋಬರ್ 31ಕ್ಕೆ ವಿಸ್ತರಣೆಯಾಗಿದೆ.