ಆಂಧ್ರಪ್ರದೇಶ : ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ. ಈ ಹಿಂದೆ 50 ರೂಪಾಯಿಗೆ ಸಿಗುತ್ತಿದ್ದ ಲಡ್ಡು ಇನ್ಮುಂದೆ ಲಾಕ್ ಡೌನ್ ಮುಗಿಯುವವರೆಗೂ 25 ರೂಪಾಯಿಗೆ ಸಿಗಲಿದೆ.
ಆದರೆ ಕೊರೊನಾ ಲಾಕ್ಡೌನ್ ಹಿನ್ನೆಲೆ ಸದ್ಯಕ್ಕೆ ತಿರುಪತಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಟಿಟಿಡಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೇ ಸಬ್ಸಿಡಿ ದರದಲ್ಲಿ ತಿಮ್ಮಪ್ಪನ ಪ್ರಸಾದ ಲಡ್ಡು ನೀಡಲು ಮುಂದಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 20ರಿಂದ ತಿರುಪತಿ ಬೆಟ್ಟ ಏರುವುದನ್ನು ಮತ್ತು ವೆಂಕಟೇಶ್ವರ ದರ್ಶನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಡ್ಡು ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಯಾ ಸ್ಥಳಗಳಿಗೆ ತಿರುಪತಿ ಲಡ್ಡು ಆಗಮಿಸುವ ದಿನಾಂಕವನ್ನು ಮೂರು ದಿನಗಳಲ್ಲಿ ತಿಳಿಸಲಾಗುವುದು ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಅಲ್ಲದೆ ಉಚಿತ ವಿತರಣೆಗಾಗಿ ಹೆಚ್ಚಿನ ಲಾಡುಗಳನ್ನು ಖರೀದಿಸಲು ಇಚ್ಛಿಸುವ ಭಕ್ತರು 9849575952 ದೂರವಾಣಿ ಸಂಖ್ಯೆ ಮೂಲಕ ಉಪ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಟಿಟಿಡಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಟಿಟಿಡಿ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ರೆಡ್ಡಿ ನಿರಾಕರಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಂಬಳ ನೀಡಲಾಗುತ್ತಿದೆ ಮೇ ಮತ್ತು ಜೂನ್ಗೂ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.








