ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಪ್ರಥಮ ಗುರುವಾರವಾದ ಇಂದು ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಿದೆ.
ಅಶ್ವಯುಜ ಮಾಸದ ಪೂರ್ಣಿಮೆಯ ನಂತರದ ಪ್ರಥಮ ಗುರುವಾರವಾದ ಇಂದು, ಹಾಸನಾಂಬೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮರುದಿನ ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನಗಳನ್ವಯ ಪೂಜೆ ನೆರವೇರಿಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಕೊರೊಬಾ ವೈರಸ್ ಹರಡುವ ಭೀತಿಯ ಕಾರಣದಿಂದಾಗಿ ಈ ಬಾರಿ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನಿಷೇಧಿಸಲಾಗಿದೆ. ಬಲಿಪಾಡ್ಯಮಿಯ ಮರು ದಿನ ಅಂದರೆ ನ.16ರ ಬೆಳಿಗ್ಗೆ ಧಾರ್ಮಿಕ ವಿಧಿ-ವಿಧಾನಗಳನ್ವಯ ಪೂಜೆ ನೆರವೇರಿಸಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ಕಟ್ಟಿದ ಹರಕೆಗಳು ತಪ್ಪದೆ ಈಡೇರುತ್ತವೆ ಎನ್ನುವುದರ ಜೊತೆಗೆ ಭಕ್ತರು ನಂಬಿಕೆಗಳ ಬೆಟ್ಟವನ್ನೇ ಹೊತ್ತಿರುವ ಐತಿಹಾಸಿಕ ದೇವಾಲಯ ಇದಾಗಿದೆ. ಮತ್ತೆ ಮುಂದಿನ ವರ್ಷದ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಪ್ರಥಮ ಗುರುವಾರವೇ ದೇವಿಯ ದರ್ಶನ ಲಭಿಸುವುದು.
ಹಾಸನಾಂಬೆ ದೇವಿಯ ಧಾರ್ಮಿಕ ಹಿನ್ನೆಲೆ..
12ನೇ ಶತಮಾನದಲ್ಲಿ ಈಗಿನ ಹಾಸನ ನಗರ ಸಿಂಹಾಸನಪುರಿ ಎಂದು ಪ್ರಸಿದ್ಧವಾಗಿತ್ತು. ನಗರವನ್ನಾಳುತ್ತಿದ್ದ ಪಾಳೇಗಾರ ಕೃಷ್ಣಪ್ಪನಾಯಕ ಒಮ್ಮೆ ಕುದುರೆಯೇರಿ ಹೋಗುತ್ತಿರುವಾಗ ಈಗ ಹಾಸನಾಂಬೆ ದೇವಸ್ಥಾನವಿರುವ ಸ್ಥಳದಲ್ಲಿ ಮೊಲವೊಂದು ರಸ್ತೆಗೆ ಅಡ್ಡಲಾಗಿ ಓಡಿ ಹೋಯಿತಂತೆ. ಅಂದು ಆತನ ಕನಸಿನಲ್ಲಿ ಕಾಣಿಸಿಕೊಂಡ ಸಪ್ತ ಮಾತೃಕೆಯರು, ತಾವು ಮೊಲ ಅಡ್ಡ ಹೋದ ಜಾಗದಲ್ಲಿ ನೆಲೆಸಿದ್ದು, ಅಲ್ಲಿ ತಮ್ಮ ಗುಡಿ ನಿರ್ಮಿಸುವಂತೆ ಸೂಚನೆ ನೀಡಿದರಂತೆ. ಅದರಂತೆ ಕೃಷ್ಣಪ್ಪನಾಯಕ ಅಲ್ಲಿ ಹಾಸನಾಂಬೆಗೆ ದೇವಸ್ಥಾನ ನಿರ್ಮಿಸಿದ ಎನ್ನಲಾಗುತ್ತದೆ.
ವಾರಣಾಸಿಯಿಂದ ದಕ್ಷಿಣದತ್ತ ವಾಯು ವಿಹಾರಾರ್ಥವಾಗಿ ಬಂದ ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ಜಿಲ್ಲೆಯಲ್ಲಿಯೇ ನೆಲೆಸಿದರು. ಅವರಲ್ಲಿ ವೈಷ್ಣವಿ, ಕೌಮಾರಿ, ಮಹೇಶ್ವರಿ ದೇವಿಯರು ಈಗಿನ ಹಾಸನಾಂಬೆ ದೇವಾಲಯದಲ್ಲಿ ಹುತ್ತ ರೂಪದಿಂದ ಬ್ರಾಹ್ಮಿದೇವಿ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾಂಬಿಕೆಯಾಗಿ ಹಾಗೂ ಚಾಮುಂಡಿ, ವಾರಾಹಿ, ಇಂದ್ರಾಣಿ ದೇವಿಯರು ನಗರದ ಮಧ್ಯ ಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದ್ದಾರೆ ಎನ್ನುವುದು ಇಲ್ಲಿನ ಧಾರ್ಮಿಕ ನಂಬಿಕೆ ಎನ್ನುತ್ತಾರೆ ಭಕ್ತರು.
ಹಾಸನಾಂಬೆ ಪೂಜೆ ವಿಧಾನಗಳೇನು..
ಹಾಸನಾಂಬೆ ದರ್ಶನೋತ್ಸವದ ಆರಂಭದ ದಿನ ಮಾತ್ರವೇ ಅಲಂಕಾರಗಳಿಲ್ಲದ ದೇವಿಯ ವಿಶ್ವರೂಪ ದರ್ಶನಕ್ಕೆ ಅವಕಾಶವಿರುತ್ತದೆ. ಬಾಗಿಲು ತೆರೆಯುವ ದಿನದ ಸಂಜೆ ದೇವಿಗೆ ವಸ್ತ್ರಾಭರಣಗಳನ್ನು ಧರಿಸಿ, ಅಲಂಕರಿಸಿ ಅಧಿಕೃತವಾಗಿ ಪೂಜೆ ಆರಂಭಿಸಲಾಗುತ್ತದೆ.
ದೇವಿಯ ವಿಶ್ವರೂಪ ದರ್ಶನದಿಂದ ಹೆಚ್ಚು ಪುಣ್ಯ ಲಭಿಸುವುದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಾಗಿಲು ತೆರೆದ ತಕ್ಷಣವೇ ದರ್ಶನ ಪಡೆಯಲು ಭಕ್ತರು ಬರುತ್ತಾರೆ. ಅಂದು ಅಧಿಕೃತವಾಗಿ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ. ಗರ್ಭಗುಡಿ ಬಾಗಿಲು ತೆರೆದ ತಕ್ಷಣ ದೇವಿಯ ಪ್ರಖರ ದೃಷ್ಟಿ ತಗುಲಿ ಯಾವುದೇ ತೊಂದರೆಯಾಗದಿರಲಿ ಎಂದು ಪ್ರತಿ ವರ್ಷವೂ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುವ ಮುನ್ನ ದೇವಾಲಯದ ಮುಂಬಾಗಿಲ ಎದುರಿಗೆ ತಳವಾರ ಮನೆತನದವರು ಬಾಳೆ ಕಂದು ನೆಟ್ಟು, ಭಕ್ತಿಯಿಂದ ಭಜಿಸಿ, ಪಂಜಿನ ಆರತಿ ಎತ್ತಿ ಬಾಳೆ ಕಂದು ಕತ್ತರಿಸುತ್ತಾರೆ.
ಹಾಸನಾಂಬೆ ರಾಜ್ಯದ ಮೂಲೆ ಮೂಲೆಯಲ್ಲಿ ಭಕ್ತರನ್ನು ಹೊಂದಿದ್ದು, ಜಿಲ್ಲೆಯಲ್ಲಿ ಕೊರೊನಾ ಹೆಚ್ಚಿರುವುದರಿಂದ ಸರಳ ಮಹೋತ್ಸವಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ. ನಗರದ 10 ಕಡೆ ಎಲ್‍ಇಡಿ ಪರದೆಗೆ ವ್ಯವಸ್ಥೆ ಮಾಡಿದ್ದು, ಅಲ್ಲಿಂದಲೇ ಭಕ್ತರು ದೇವಿಯ ದರ್ಶನ ಪಡೆಯಬಹುದು.
ಮಧ್ಯಾಹ್ನ 1.30ರಿಂದ 2.30ರವರೆಗಿನ ನೈವೇದ್ಯ ಸಮಯ ಹೊರತುಪಡಿಸಿ ಉಳಿದ ವೇಳೆ ದೇವಿಯನ್ನು ಜನರು ಕಣ್ತುಂಬಿಕೊಳ್ಳಬಹುದು. ಗರ್ಭಗುಡಿ ಬಾಗಿಲು ತೆರೆಯುವ ಹಾಗೂ ಹಾಕುವ ದಿನದಂದು ವಿಶೇಷ ಆಹ್ವಾನಿತರಿಗೆ ದೇವಸ್ಥಾನಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ.
ಕೋವಿಡ್ ಭೀತಿ ಹಿನ್ನೆಲೆ ಈ ಬಾರಿ ಹಾಸನಾಂಬೆ ದೇವಿ ದರ್ಶನ ಮಾಡಲು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಈ ವರ್ಷ ನವೆಂಬರ್ 5 ರಿಂದ 16ರವರೆಗೆ ಬಾಗಿಲು ತೆರೆಯಲಿದೆ. ದೇವಾಲಯದ ಬಾಗಿಲು ತೆರೆಯುವ ಮೊದಲ ದಿನ ಮತ್ತು ಕೊನೆಯ ದಿನದಂದು ಆಹ್ವಾನಿತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು.
ಉಳಿದಂತೆ ಹಾಸನಾಂಬ ದೇವರ ದರ್ಶನಕ್ಕೆ ಯಾರಿಗೂ ಅವಕಾಶವಿಲ್ಲ. ಸಾರ್ವಜನಿಕರಿಗಾಗಿ ದೇವರ ಪೂಜೆ ವೀಕ್ಷಿಸಲು ಹಾಸನ ನಗರದ 10 ಕಡೆ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. “hasanambalive2020” ಎಂದು ಸರ್ಚ್ ಮಾಡುವ ಮೂಲಕ ಯೂಟ್ಯೂಬ್‍ನಿಂದ ಪೂಜೆಯ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಪ್ರಸಾದದ ವ್ಯವಸ್ಥೆ ಕೂಡ ಇರುವುದಿಲ್ಲ ಎಂದು ಡಿಸಿ ಗಿರೀಶ್ ಹೇಳಿದ್ದಾರೆ.
ಕಳೆದ ವರ್ಷ ಸುಮಾರು 5 ಲಕ್ಷ ಭಕ್ತರು ನೇರವಾಗಿ ಹಾಸನಾಂಬೆ ದರ್ಶನ ಪಡೆದಿದ್ದರು. ಅಂದರೆ ಪ್ರತಿ ದಿನ ಸುಮಾರು 50 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಬಂದರೆ ನಿಯಂತ್ರಿಸುವುದು ಕಷ್ಟ ಸಾಧ್ಯ. ಅಲ್ಲದೇ ಕೋವಿಡ್ ಭೀತಿಯೂ ಇರುವುದರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಹಾಸನನಾಂಬ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ತೆಗೆದರೂ ಹಲವಾರು ಪವಾಡಕ್ಕೆ ಹೆಸರುವಾಸಿಯಾಗಿದೆ. ದೇವಾಲಯದ ಬಾಗಿಲು ಹಾಕುವಾಗ ಹಚ್ಚಿದ ದೀಪ ಮುಂದಿನವರ್ಷ ಬಾಗಿಲು ತೆರೆದಾಗಲೂ ಆರಿರುವುದಿಲ್ಲ. ದೇವರಿಗೆ ಮುಡಿಸಿದ ಹೂವು ಬಾಡಿರುವುದಿಲ್ಲ.
ದೇವರ ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ ಎಂದು ಹಾಸನಾಂಬೆ ಮಹಿಮೆ ಕುರಿತು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel