ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಹೌದು. ಇಂದು ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟಿದ ದಿನ.
ಅಭಿಮಾನಿಗಳು 91ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಕೊರೊನಾ ಹಾವಳಿಯ ಪರಿಣಾಮ ಮೊದಲ ಬಾರಿಗೆ ರಾಜ್ ಉತ್ಸವ ಮಿಸ್ ಆಗುತ್ತಿದೆ. ಆದರೂ ಅಭಿಮಾನಿಗಳು ಮನೆಯಲ್ಲಿಯೇ ಸಂಭ್ರಮಿಸುತ್ತಿದ್ದಾರೆ.
ಇನ್ನೂ ಪ್ರತೀವರ್ಷ ರಾಜ್ ಕುಮಾರ್ ಕುಟುಂಬ ಸಮಾಧಿಯ ಬಳಿ ಹೋಗಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಸಮಾಧಿಯ ಬಳಿ ಹೋಗದೆ ಮನೆಯಲ್ಲಿಯೇ ರಾಜ್ ಫೋಟೋಗೆ ಪೂಜೆ ಮಾಡಿ ಅಪ್ಪಾಜಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್, ಶಿವಣ್ಣ ಮತ್ತು ಪುನೀತ್ ವಿಡಿಯೋ ಮೂಲಕ ಮನೆಯಲ್ಲಿಯೆ ಅಪ್ಪಾಜಿ ಹುಟ್ಟುಹಬ್ಬವನ್ನು ಸಂಭ್ರಮಿಸಿ, ಯಾರು ಮನೆಯಿಂದ ಹೊರ ಬರಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಏಪ್ರಿಲ್ 24 1929ರಲ್ಲಿ ಜನಿಸಿದ ವರನಟ ಡಾ. ರಾಜ್ ಅವರ ಜೀವನ ಒಲವಿನ ಸಾಕ್ಷಾತ್ಕಾರ. ಸಾಂಸಾರಿಕ ಬದುಕಿನಲ್ಲೂ, ಜೀವನ ಚೈತ್ರ ಕಂಡವರು. ಡಾ. ರಾಜ್ ಚೆಂದವಳ್ಳಿಯ ತೋಟದಂತ ತುಂಬು ಸಂಸಾರಕ್ಕೆ, ಪ್ರೀತಿ, ವಿಶ್ವಾಸಗಳ ಶೃತಿ ಸೇರಿಸಿ, ಜೀವನ ರಾಗ ಹಾಡಿದರು ಮುತ್ತಣ್ಣ. ಡಾ. ರಾಜ್ ಅವರ ಸಂಸಾರ, ಆನಂದ ಸಾಗರ.
ಇನ್ನು ಸಿನಿರಂಗದ ನಟಸಾರ್ವಭೌಮರ ಹೆಜ್ಜೆ ಗುರುತು ಹಿಡಿದಿರಿಸುವ ಪ್ರೀತಿಯ ಕ್ಷಣಗಳು, ಇನ್ನೂ ಮರೆಯಲಾರದ ನೆನಪುಗಳು ಮಾತ್ರ. ಕೋಟಿ ಕೋಟಿ ಕನ್ನಡಿಗರ ಹೃದಯ ಮೆರೆದ ರಾಜ್ ಕುಮಾರ್, ಕನ್ನಡಿಗರ ಮನೆಯ ಅಂಗಳದಲ್ಲಿ ಹಿರಿಯ ರಂಗೋಲಿ ಬಿಡಿಸಿದ್ದಾರೆ. ಮನದಲ್ಲಿ ಕನ್ನಡಿಗರ ಸ್ವಾಭಿಮಾನದ ಚಿತ್ತಾರ ಮೂಡಿಸಿದ್ದಾರೆ. ಸಹಸ್ರ ಸಹಸ್ರ ಸಮುದಾಯದ ಕಣ್ಣಂಚಿನಲ್ಲೂ ನೀರು ಮೂಡಿಸಿ ಮರೆಯಾಗಿದ್ದಾರೆ ಡಾ. ರಾಜ್ ನಿಜಕ್ಕೂ ಇದೀಗ ನಕ್ಷತ್ರ ಲೋಕದ ಧ್ರುವತಾರೆ.








