1934 ಮಾರ್ಚ್ 3 ಇದು ಕನ್ನಡ ಚಿತ್ರರಂಗ ನೆನಪಿಡಬೇಕಾದ ದಿನಾಂಕ. ಏಕೆಂದರೆ ಇಂದು ಕನ್ನಡ ಚಿತ್ರರಂಗ ತನ್ನ ಅಸ್ತಿತ್ವವನ್ನು ಕಂಡುಕೊಂಡ. ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಮುನ್ನುಡಿ ಬರೆದ ದಿನ. ಅಲ್ಲಿಂದ ಇಲ್ಲಿಯವರೆಗೆ ಕಲ್ಲು ಮುಳ್ಳುಗಳ ದಾರಿಯಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ಬೆಳೆದಿದೆ, ಬೆಳೆಯುತ್ತಲೇ ಇದೆ.1934ರ ಮಾರ್ಚ್ 3ರಂದು ಕನ್ನಡದ ಮೊಟ್ಟಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಬಿಡುಗಡೆಯಾಗಿತ್ತು. ಅಂದಹಾಗೆ ಕನ್ನಡ ಚಿತ್ರರಂಗ ಹುಟ್ಟಿ ಇಂದಿಗೆ 87 ವರ್ಷ. ಈ 87 ವರ್ಷಗಳಲ್ಲಿ ಕನ್ನಡದಲ್ಲಿ ಸುಮಾರು 4,500 ಸಿನಿಮಾಗಳು ಬಿಡುಗಡೆಯಾಗಿವೆ.

ಇವುಗಳಲ್ಲಿ ಕೆಲವು ಸಿನಿಮಾಗಳು ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಆದರೆ ನೆರೆಯ ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮ ಕನ್ನಡ ಚಿತ್ರರಂಗದ ಒಟ್ಟಾರೆ ಬೆಳವಣಿಗೆ ಅಷ್ಟು ಆಶಾದಾಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಅಂಬರೀಷ್, ಶಂಕರ್‌ನಾಗ್, ಮುಂತಾದ ದಿಗ್ಗಜ ನಟರು ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅದರ ಮೇಲೆ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ಗಣೇಶ್, ಯಶ್,ಮುಂತಾದ ನಟರು ತಮ್ಮ ಗುರುತು ಮೂಡಿಸಿದ್ದಾರೆ.

ಒಟ್ಟಾರೆ ಸಾಕಷ್ಟು ಕೊರತೆಗಳ ನಡುವೆಯೇ ನಮ್ಮ ಚಿತ್ರರಂಗ ಸಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗ ಬೆರಗು ಕಣ್ಣಿನಿಂದ ನೋಡುವಂತೆ ಮಾಡುತ್ತಿದೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಹಾಗೂ ಬೇಡಿಕೆ ಸೃಷ್ಟಿಸುವ ತಾಕತ್ತು ಪ್ರದರ್ಶಿಸುತ್ತಿದೆ. ಇದು ಹೀಗೆ ಮುಂದುವರೆಯಲಿ.. ಎಂದು ಆಶಿಸುತ್ತಾ ನೀವು ಸಹ ನಮ್ಮ ಚಿತ್ರರಂಗಕ್ಕೆ ಶುಭಾಶಯ ತಿಳಿಸಿ..








