ಜಾಥಾದಲ್ಲಿ ಒಂದು ಲಕ್ಷಕ್ಕೂ ಅಧಿಕ ನೌಕರರು ಭಾಗಿ ಸಾಧ್ಯತೆ
ಮತ್ತೆ ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಬಿಸಿ ಪಕ್ಕಾ
ರಾಜ್ಯಾದ್ಯಂತ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಅನುಮಾನ
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳ ಸುಮಾರು 1 ಲಕ್ಷಕ್ಕೂ ಹೆಚ್ಚು ನೌಕರರು ಇಂದು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ.
ಹೀಗಾಗಿ ಇಂದು ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಬಸ್‍ಗಳು ರಸ್ತೆಗಿಳಿಯುವುದು ಅನುಮಾನವಾಗಿದೆ. ಇಂದು ಜನರು ಸರ್ಕಾರಿ ಬಸ್‍ಗಳ ಮೂಲಕ ಪ್ರಯಾಣಿಸುವ ಪ್ಲಾನ್ ಹಾಕಿಕೊಂಡಿದ್ದರೆ ಮುಂದೂಡುವುದು ಒಳ್ಳೆಯದು.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್‍ಇಕೆಆರ್‍ಟಿಸಿ ಹಾಗೂ ಎನ್‍ಡಬ್ಲೂಕೆಆರ್‍ಟಿಸಿ ಸೇರಿ ರಾಜ್ಯದಲ್ಲಿ 1.40 ಲಕ್ಷ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ನೌಕರರ ಜತೆ ಅವರ ಪತ್ನಿಯರು ಹಾಗೂ ಮಕ್ಕಳೂ ಕೂಡ ಪಾಲ್ಗೊಳ್ಳುತ್ತಿರುವುದರಿಂದ ಮತ್ತೆ ಬೆಂಗಳೂರು ನಗರ ಟ್ರಾಫಿಕ್‍ನಿಂದ ಲಾಕ್ ಆಗುವ ಸಾಧ್ಯತೆ ಇದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ, ಕೃಷಿ ಕಾಯ್ದೆಗಳ ವಿರುದ್ಧ ನಡೆದ ಕರ್ನಾಟಕ ಬಂದ್, ಭಾರತ್ ಬಂದ್ ಹಾಗೂ ಬಾರುಕೋಲು ಚಳವಳಿ ಸೇರಿ ಸಾಲು ಸಾಲು ಪ್ರತಿಭಟನೆಗಳಿಂದ ತತ್ತರಿಸಿರುವ ಬೆಂಗಳೂರು ನಗರದ ಜನತೆಗೆ ಇಂದೂ ಕೂಡ ಪ್ರತಿಭಟನೆ ಬಿಸಿ ತಟ್ಟಲಿದೆ.
ಬೆಳಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಧವರೆಗೆ ಸಾರಿಗೆ ನೌಕರರು ಕಾಲ್ನಡಿಗೆ ಜಾಥಾ ಹೊರಡಲಿದ್ದಾರೆ. ಸಾರಿಗೆ ನೌಕರರ ನಡಿಗೆ- ಸರ್ಕಾರಿ ನೌಕರರಾಗುವ ಕಡೆಗೆ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲಿದ್ದಾರೆ. ಜತೆಗೆ ಈ ಜಾಥಾದಲ್ಲಿ ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಹ ಭಾಗಿಯಾಗಲಿದ್ದಾರೆ ಎಂದು ನೌಕರರ ಸಂಘ ತಿಳಿಸಿದೆ.
ಸಾರಿಗೆ ನೌಕರರು ಸರ್ಕಾರಿ ನೌಕರರಾಗಿ ಪರಿಗಣನೆ ಇಲ್ಲ-ಸವದಿ
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಎಲ್ಲಾ ವೇತನ ಬಿಡುಗಡೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾನವೀಯತೆ ಮೇರೆದು ಸಂಬಳ ನೀಡಲು ಹಣಕಾಸು ಸೌಲಭ್ಯ ಕಲ್ಪಿಸಿದ್ದಾರೆ. ಹೀಗಾಗಿ ನೌಕರರ 7 ತಿಂಗಳ ಸಂಬಳ ಪಾವತಿ ಮಾಡಲಾಗಿದೆ. ಉಳಿದ 2 ತಿಂಗಳ 8-10 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮಣ್ ಸವದಿ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel