ಧಾರವಾಡ: ಇಂದು ಅಣ್ಣನ ಬರ್ತ್ಡೇ, ಜೈಲಿಗೆ ಹೋದ್ರೂ ಅಣ್ಣ ಬಂದೇ ಬರ್ತಾರೆ, ಬರ್ತ್ ಡೇ ಜೋರಾಗಿ ಸೆಲಬ್ರೇಟ್ ಮಾಡೋಣ ಎಂದು ಭರ್ಜರಿ ಪ್ಲ್ಯಾನ್ ಮಾಡಿ ಬ್ಯಾನರ್ ಕಟ್ಟಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಒಂದು ದಿನ ನ್ಯಾಯಾಂಗ ಬಂಧನದಲ್ಲಿದ್ದ ವಿನಯ್ ಕುಲಕರ್ಣಿ ಅವರನ್ನು 3 ದಿನ ಸಿಬಿಐ ಕಸ್ಟಡಿಗೆ ನೀಡಲಾಗಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಧಾರವಾಡದ 3ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು, ನ.9ರಂದು ಬೆಳಿಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.
ವಿನಯ್ ಕುಲಕರ್ಣಿ ಅವರನ್ನು ಕಸ್ಟಡಿಗೆ ಪಡೆಯಲು ಸಿಬಿಐ ಅಧಿಕಾರಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸಿಬಿಐ ಅರ್ಜಿಗೆ ವಿನಯ್ ಕುಲಕರ್ಣಿ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದರು. ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಮಟ್ಟಿಗಾದರೂ ಕಸ್ಟಡಿಗೆ ನೀಡುವಂತೆ ಸಿಬಿಐ ಪರ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಲಯ 3ದಿನ ಕಸ್ಟಡಿಗೆ ನೀಡಿದೆ.
ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಗುರುವಾರ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಗುರುವಾರ ಸಂಜೆ ಕೋರ್ಟ್ಗೆ ಹಾಜರುಪಡಿಸಿದಾಗ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸಿಬಿಐ ಕಸ್ಟಡಿಗೆ ನೀಡಿದ್ರೂ ಜೈಲು ವಾಸ..!
ಶುಕ್ರವಾರ ವಿನಯ್ ಕುಲಕರ್ಣಿ ಅವರನ್ನು 3 ದಿನ ಸಿಬಿಐ ಕಸ್ಟಡಿಗೆ ನೀಡಿದ್ರೂ, ವಶಕ್ಕೆ ತೆಗೆದುಕೊಳ್ಳುವಲ್ಲಿ ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ.
ಧಾರವಾಡ ಕೋರ್ಟ್ ನೀಡಿದ ಕಸ್ಟಡಿ ಆದೇಶದ ಪ್ರತಿ ತೆಗೆದುಕೊಂಡು ಸಿಬಿಐ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಜೈಲು ತಲುಪುವುದರೊಳಗೆ ಸಂಜೆಯಾಗಿತ್ತು. ಜೈಲಿನ ನಿಯಮದ ಪ್ರಕಾರ ಯಾವುದೇ ಖೈದಿಗಳನ್ನು ಸಂಜೆ 6.15ರೊಳಗೆ ಜೈಲಿನಿಂದ ಕರೆದೊಯ್ಯಬಹುದು ಹಾಗೂ ವಿಶೇಷ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಸಂಜೆ 6.15ರ ನಂತರ ಜೈಲಿಗೆ ಕರೆದೊಯ್ಯಬಹುದು.
ಆದರೆ, ಸಿಬಿಐ ಅಧಿಕಾರಿಗಳು ಹಿಂಡಲಗಾ ಜೈಲು ತಲುಪುವುದರೊಳಗೆ ಸಂಜೆ 6.15 ಮೀರಿದ್ದರಿಂದ ಶುಕ್ರವಾರ ಸಂಜೆ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ನೀಡಲು ಸಾಧ್ಯವಾಗಿಲ್ಲ.
ಇಂದು ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಸಿಬಿಐ ಅಧಿಕಾರಿಗಳು ಎರಡು ದಿನಗಳ ಕಾಲ ವಿಚಾರಣೆ ನಡೆಸಲಿದ್ದಾರೆ.
ಹುಟ್ಟುಹಬ್ಬಕ್ಕೆಂದು ಹಾಕಿದ್ದ ಬ್ಯಾನರ್ ವೇಸ್ಟ್
ಒಂದು ದಿನ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಂದು(ಶನಿವಾರ) ಹುಟ್ಟುಹಬ್ಬದ ಸಂಭ್ರಮ. ಜಾಮೀನು ಪಡೆದು ವಿನಯ್ ಕುಲಕರ್ಣಿ ಜೈಲಿನಿಂದ ಹೊರಗೆ ಬಂದೇ ಬರುತ್ತಾರೆ. ಹೀಗಾಗಿ ಅದ್ದೂರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡೋಣ ಎಂದು ಅಭಿಮಾನಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದರು.
ಅಭಿಮಾನಿಗಳು ಧಾರವಾಡದ ಎಲ್ಲ ಕಡೆ ಶುಭಾಶಯ ಕೋರಿ ಬ್ಯಾನರ್, ಬಂಟಿಂಗ್ಸ್ಗಳನ್ನು ಹಾಕಿದ್ದರು. ಅಲ್ಲದೆ ವಿನಯ್ ಕುಲಕರ್ಣಿ ಅವರ ಮುಖವಾಡಗಳನ್ನು ಕೂಡ ತಯಾರಿಸಿದ್ದರು. ಆದರೆ, ಅಭಿಮಾನಿಗಳ ಕನಸಿಗೆ ಧಾರವಾಡ ಕೋರ್ಟ್ ತಣ್ಣೀರೆರಚಿದ್ದು, ವಿನಯ್ ಕುಲಕರ್ಣಿ ಅವರನ್ನು 3 ದಿನ ಸಿಬಿಐ ಕಸ್ಟಡಿಗೆ ನೀಡಿದೆ. ಹೀಗಾಗಿ ಕುಲಕರ್ಣಿ ಹಾಗೂ ಅವರ ಬೆಂಬಲಿಗರಿಗೆ ಈ ವರ್ಷ ಬರ್ತ್ಡೇ ಆಚರಿಸಿಕೊಳ್ಳುವ ಅವಕಾಶ ತಪ್ಪಿದಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel