ಟೋಕಿಯೋ ಒಲಿಂಪಿಕ್ಸ್ 2021 – ಜುಲೈ 24 – ಮೊದಲ ದಿನ ಬೆಳ್ಳಿ ಪದಕ… ಇನ್ನುಳಿದಂತೆ ಭಾರತಕ್ಕೆ ಸ್ವಲ್ಪ ಸಿಹಿ.. ಸ್ವಲ್ಪ ಕಹಿ..!
ವೇಟ್ ಲಿಫ್ಟಿಂಗ್ – ಮೀರಾಬಾಯಿ ಚಾನು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕದ ನಗೆ ಬೀರಿದ್ದಾರೆ. ಎರಡನೇ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧೆ ಮಾಡುತ್ತಿರುವ ಮೀರಾ ಚಾನು ಒಟ್ಟು 202 ಕೆಜಿ (89 ಸ್ನ್ಯಾಚ್ ಮತ್ತು 115 ಜರ್ಕ್) ಭಾರ ಎತ್ತುವ ಮೂಲಕ ಭಾರತದ ಪರ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಹಾಕಿ –
ಟೋಕಿಯೋ ಒಲಿಂಪಿಕ್ಸ್ ನ ಹಾಕಿ ಸ್ಪರ್ಧೆಯ ಲೀಗ್ ಪಂದ್ಯಗಳಲ್ಲಿ ಭಾರತ ಮಿಶ್ರ ಫಲ ಅನುಭವಿಸಿದೆ. ಭಾರತದ ಪುರುಷರ ತಂಡ 3-2ರಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಆದ್ರೆ ಮಹಿಳೆಯರ ತಂಡ 1-5ರಿಂದ ನೆದರ್ಲೆಂಡ್ ವಿರುದ್ಧ ಸೋಲು ಅನುಭವಿಸಿದೆ.
ಟೆನಿಸ್
ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ನ ಟೆನಿಸ್ ನಲ್ಲಿ ಭಾರತದ ಸುಮಿತ್ ನಗಾಲ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸುಮಿತ್ ನಗಾಲ್ 6-4, 6-7ರಿಂದ ಡೆನಿಸ್ ಐಸ್ಟೊಮಿನ್ ಅವರನ್ನು ಸೋಲಿಸಿದ್ರು. ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಅವರು ವಿಶ್ವದ ಎರಡನೇ ಶ್ರೇಯಾಂಕಿತ ಡೇನಿಲ್ ಮೆಡ್ವೆಡೇವ್ ಅವರನ್ನು ಎದುರಿಸಲಿದ್ದಾರೆ.
ಬ್ಯಾಡ್ಮಿಂಟನ್
ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ ನ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಡಬಲ್ಸ್ ನಲ್ಲಿ ಭಾರತದ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಸಾತ್ವಿಕ್ ಮತ್ತು ಚಿರಾಗ್ ಅವರು ವಿಶ್ವದ ಮೂರನೇ ಶ್ರೇಯಾಂಕಿತರಾದ ಚೈನಿಸ್ ಥೈಪೈಯ ಯಂಗ್ ಲಿ ಮತ್ತು ಚಿನ್ ಲೀ ಅವರಿಗೆ ಆಘಾತ ನೀಡಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಇನ್ನೊಂದೆಡೆ, ಸಿಂಗಲ್ಸ್ ನಲ್ಲಿ ಪಿ. ಸಾಯ್ ಪ್ರನೀತ್ ಅವರು ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ.
ಟೇಬಲ್ ಟೆನಿಸ್
ಭಾರತದ ಮನಿಕಾ ಬಾತ್ರ ಮತ್ತು ಸುತಿರ್ಥ ಮುಖರ್ಜಿ ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮನಿಕಾ ಬಾತ್ರ ಅವರು 4-0 ಯಿಂದ ಬ್ರಿಟನ್ ನ ಟಿನ್ ಟಿನ್ ಹೊ ಅವರನ್ನು ಸೋಲಿಸಿದ್ರು. ಹಾಗೇ ಸುತಿರ್ಥ ಮುಖರ್ಜಿ ಅವರು 4-3ರಿಂದ ಸ್ವೀಡನ್ ನ ಲಿಂಡಾ ಬೆರ್ಜ್‍ಸ್ಟೊಮ್ ಅವರನ್ನು ಮಣಿಸಿದ್ರು.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲಿ ಭಾರತದ ಪದಕದ ಆಸೆ ಕಮರಿ ಹೋಗಿದೆ. ಮನಿಕಾ ಬಾತ್ರ ಮತ್ತು ಶರತ್ ಕಮಾಲ್ ಅವರು 0-4ರಿಂದ ಲಿನ್ ಯುನ್ ಜಿ ಮತ್ತು ಚೆಂಗ್ ಚಿಂಗ್ ವಿರುದ್ಧ ಸೋಲು ಅನುಭವಿಸಿದ್ರು.
ಬಾಕ್ಸಿಂಗ್
ಇನ್ನು ಟೋಕಿಯೊ ಒಲಿಂಪಿಕ್ಸ್ ನ ಬಾಕ್ಸಿಂಗ್ ರಿಂಗ್ ನಲ್ಲೂ ಭಾರತ ನಿರಾಸೆ ಅನುಭವಿಸಿದೆ. ಪುರುಷರ 69 ಕೆಜಿ ವಿಭಾಗದಲ್ಲಿ ವಿಕಾಸ್ ಕೃಶಾನ್ ಅವರು ಗಾಯಗೊಂಡು ಸ್ಪರ್ಧೆಗಿಳಿದ್ರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಜೂಡೋ
ಹಾಗೇ ಜುಡೋ ಸ್ಪರ್ಧೆಯಲ್ಲೂ ಭಾರತ ನೀರಸ ಪ್ರದರ್ಶನ ನೀಡಿದೆ. ಭಾರತದ ಸುಶೀಲಾ ದೇವಿ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ರು. ಹಾಗೇ ಪುರುಷರ ಡಬಲ್ಸ್ ವಿಭಾಗದ ಲೈಟ್ ವೇಟ್ ಸ್ಕಲ್ಸ್ ರೋವರ್ಸ್ ನಲ್ಲಿ ಅರವಿಂದ್ ಸಿಂಗ್ ಮತ್ತು ಅರ್ಜುನ್ ಲಾಲ್ ಅವರು ಹೀಟ್ಸ್ ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಶೂಟಿಂಗ್
ಟೋಕಿಯೋ ಒಲಿಂಪಿಕ್ಸ್ ನ ಶೂಟಿಂಗ್ ವಿಭಾಗದಲ್ಲಿ ಭಾರತ ಭಾರೀ ನಿರಾಸೆ ಅನುಭವಿಸಿದೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಬ್ ಚೌಧುರಿ, ಅಪೂರ್ವಿ ಚಾಂಡೆಲಾ, ಇಲಾವೆನಿಲ್ ವಲೇರಿಯನ್ ಅವರು ನೀರಸ ಪ್ರದರ್ಶನ ನೀಡಿದ್ರು.
ಆರ್ಚೆರಿ
ಒಲಿಂಪಿಕ್ಸ್ ಕ್ರೀಡಾಕೂಟದ ಆರ್ಚೆರಿ ವಿಭಾಗದಲ್ಲೂ ಭಾರತದ ಸ್ಪರ್ಧಿಗಳು ಹಿನ್ನಡೆ ಅನುಭವಿಸಿದ್ರು. ಮಿಶ್ರ ಡಬಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀನ್ ಜಾಧವ್ ಅವರು ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯ ವಿರುದ್ಧ ಸೋಲು ಅನುಭವಿಸಿದ್ದರು.








