ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಜುಲೈ 25ರ ರಿಸಲ್ಟ್ – ಹಾಕಿಯಲ್ಲಿ ಮುಖಭಂಗ.. ಸಿಂಧು, ಮೇರಿಕೋಮ್, ಮನಿಕಾಗೆ ಮುನ್ನಡೆ
ಬ್ಯಾಡ್ಮಿಂಟನ್
ಭಾರತದ ಸಿಂಧೂರ ಪಿ.ವಿ. ಸಿಂಧು ಅವರು ಮುನ್ನಡೆ ಸಾಧಿಸಿದ್ದಾರೆ. ಜೆ ಗುಂಪಿನ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21-7, 21-10ರಿಂದ ಇಸ್ರೇಲ್ ನ ಸೆನಿಯಾ ಪೊಲಿಕಾರ್ಪೊವಾ ಅವರನ್ನು ಸೋಲಿಸಿದ್ರು.
ಬಾಕ್ಸಿಂಗ್
ಮಹಿಳೆಯರ 51 ಕೆಜಿ ಸ್ಪರ್ಧೆಯ ಬಾಕ್ಸಿಂಗ್ ನಲ್ಲಿ ಭಾರತದ ಭರವಸೆಯ ಸ್ಪರ್ಧಿ ಮೇರಿ ಕೋಮ್ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆಕ್ರಮಣಕಾರಿಯಾಗಿ ಪಂಚ್ ಗಳನ್ನು ನೀಡಿದ್ದ ಮೇರಿಕೋಮ್ 4-1ರಿಂದ ಡೊಮಿನಿಯನ್ ರಿಪಬ್ಲಿಕ್ ನ ಮಿಗ್ಯುಲಿನಾ ಹೆರ್ನಾಂಡೇಜ್ ಅವರನ್ನು ಸೋಲಿಸಿದ್ರು.
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್
ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಭಾರತದ ಪ್ರಣತಿ ನಾಯಕ್ ನಿರಾಸೆ ಅನುಭವಿಸಿದ್ದಾರೆ. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಪ್ರಣತಿ ನಾಯಕ್ 42565 ಅಂಕಗಳನ್ನು ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಸಬ್ ಡಿವಿಷನ್ -1 ಸ್ಪರ್ಧೆಯಲ್ಲಿ ಅರ್ಹತೆ ಪಡೆದುಕೊಳ್ಳಲಿಲ್ಲ.
ಹಾಕಿ
ಭಾರತ ಪುರುಷರ ಹಾಕಿ ತಂಡ 1-7 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದೆ.
ರೋಯಿಂಗ್
ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಪುರುಷರ ಲೈಟ್ ವೇಟ್ ಡಬಲ್ ಸ್ಕಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೇಲಿಂಗ್
ಭಾರತದ ನೇತ್ರಾ ಕುಮಾರ್ ಮತತ್ತು ವಿಷ್ಣು ಸರವಣ ಅವರು ಸೇಲಿಂಗ್ ಸ್ಪರ್ಧೆಯಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ.
ಶೂಟಿಂಗ್
ಶೂಟಿಂಗ್ ನಲ್ಲೂ ಭಾರತದ ಸ್ಪರ್ಧಿಗಳು ನೀರಸ ಪ್ರದರ್ಶನ ನೀಡಿದ್ದಾರೆ. ಮನು ಬಾಕೇರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ಸುತ್ತಿಗೆ ಪ್ರವೇಶಿಸಲು ವಿಫಲರಾಗಿದ್ದಾರೆ. ಕೇವಲ 2 ಅಂಕದಿಂದ ಅವಕಾಶವನ್ನು ಕಳೆದುಕೊಂಡ್ರು.
ಇನ್ನು ಯಶಸ್ವಿನಿ ದೇಸ್ವಾಲ್ ಕೂಡ ಹಿನ್ನಡೆ ಅನುಭವಿಸಿದ್ದಾರೆ. ಅಂಗಡ್ ವೀರ್ ಸಿಂಗ್ ಬಾಜ್ವಾ ಕೂಡ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ. ಹಾಗೇ ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲೂ ದೀಪಕ್ ಕುಮಾರ್, ದಿವ್ಯಾಂಶು ಸಿಂಗ್ ಕೂಡ ನಿರಾಸೆ ಅನುಭವಿಸಿದ್ದಾರೆ.
ಸ್ವಿಮ್ಮಿಂಗ್
ಸ್ವಿಮ್ಮಿಂಗ್ ವಿಭಾಗದಲ್ಲಿ ಭಾರತದ ಶ್ರಿಹರಿ ನಟರಾಜ್ ಮತ್ತು ಮಾನಾ ಪಟೇಲ್ ಅವರು ಪುರುಷರ ಮತ್ತು ಮಹಿಳೆಯರ 100 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಟೇಬಲ್ ಟೆನಿಸ್
ಭಾರತದ ಮನಿಕಾ ಬಾತ್ರ ಅವರು ಮಹಿಳೆಯರ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಮಾನಿಕಾ ಬಾತ್ರ ಅವರು ಉಕ್ರೇನ್ ನ ಮಾರ್ಗರಟ್ಯಾ ಪೆಸೊಟೊಸ್ಕಾ ಅವರನ್ನು ಸೋಲಿಸಿದ್ರು. ಆದ್ರೆ ಪುರುಷರ ವಿಭಾಗದಲ್ಲಿ ಗುಣಶೇಕರನ್ ಸತಿಯನ್ ಅವರು ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.