ಕೊರೊನಾ ವೈರಸ್ ಹರಡುವಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿವೆ. 21 ದಿನಗಳ ಕಾಲ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿತ್ತು.ಇದೀಗ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
21 ದಿನಗಳ ಕಾಲ ದೇಶ ಲಾಕ್ ಡೌನ್ ಆಗಿದೆ. ಹಾಗಾಗಿ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಈ ವೇಳೆ ಅಗತ್ಯ ವಸ್ತುಗಳು ಸಿಗುತ್ತವೆ ಎಂದು ಸರ್ಕಾರಗಳು ಭರವಸೆ ನೀಡಿದ್ದವು. ತುರ್ತು ಸೇವೆಗಳ ಲಭ್ಯತೆಯನ್ನು ಸುಲಭಗೊಳಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ.
ಈ ವಿಚಾರವಾಗಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶ ಸಂಕಷ್ಟದಲ್ಲಿದೆ. ಅಲ್ಲದೆ ಇಂತಹ ಸನ್ನಿವೇಶದಲ್ಲೂ ಕೊರೊನಾ ವಿರುದ್ಧ ದೇಶ ಸಮರ ಸಾರಿದೆ. ಲಾಜಿಸ್ಟಿಕ್ಸ್ ಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಜೊತೆಗೆ ಈ ಸೌಲಭ್ಯ ಉಳಿದ ತುರ್ತು ಸಾರಿಗೆ ಸಂಚಾರಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.








