ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಠ’ ಸಿನಿಮಾದ ಪೋಸ್ಟರ್ ಈಗಷ್ಟೆ ಬಿಡುಗಡೆ ಆಗಿದೆ. ಸದ್ಯ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ ಎಂದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಂದಹಾಗೆ ಸುದೀಪ್ ಅವರಿಗೆ ಅನ್ಯ ಭಾಷೆಯಲ್ಲಿ ಭಾರಿ ಬೇಡಿಕೆ ಇರುವುದು ಗೊತ್ತಿರುವ ಸಂಗತಿಯೇ. ತೆಲುಗಿನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೇ ನಟಿಸಿದ್ದಾರೆ. ಹಾಗಾಗಿ ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದರೆ ಅಚ್ಚರಿ ಪಡುವಂತಿಲ್ಲ. ಆದರೆ ‘ಸರ್ಕಾರು ವಾರಿ ಪಾಠ’ ಚಿತ್ರತಂಡ, ಮಹೇಶ್ ಬಾಬು ಬಿಟ್ಟರೆ ಇನ್ನಾವ ನಟ-ನಟಿಯರು ತಮ್ಮ ಸಿನಿಮಾದಲ್ಲಿರಲಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಅವರು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಸುದೀಪ್ ಅವರ ಕೋಟಿಗೊಬ್ಬ 3 ಬಿಡುಗಡೆಗೆ ತಯಾರಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ನಿರೂಪ್ ಭಂಡಾರಿ ನಟಿಸುತ್ತಿದ್ದಾರೆ.