ನವದೆಹಲಿ: ದೆಹಲಿಯಲ್ಲಿ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರ ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ರಾಷ್ಟ್ರಪತಿ ಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜಧಾನಿಯಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮನವಿ ಮಾಡಲಿದೆ. ಈ ಕುರಿತು ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮುಖಂಡರಾದ ಎ.ಕೆ.ಅಂತೋಣಿ, ಗುಲಾಂನಬಿ ಅಜಾದ್, ಪಿ.ಚಿದಂಬರಂ, ಪ್ರಿಯಾಂಕ ಗಾಂಧಿ ವಾದ್ರಾ ಮೊದಲಾದವರು ಪಾಲ್ಗೊಂಡಿದ್ದರು.
ಸಭೆಯ ನಂತರ ಮಾತನಾಡಿದ ಸೋನಿಯಾ ಗಾಂಧಿ, ದೆಹಲಿಯಲ್ಲಿ ಹಿಂಸಾಚಾರ ಭುಗಿಲೇಳಲು ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣವೇ ಕಾರಣ. ರಾಜಧಾನಿಯಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನಾವು ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.








