ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಏಪ್ರಿಲ್ 20ರವರೆಗೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು. ಪ್ರಧಾನ ಮಂತ್ರಿಗಳು ನಾಳೆ ಹೊರಡಿಸುವ ಮಾರ್ಗಸೂಚಿಗಳನ್ನು ನೋಡಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಯಾವ ರೀತಿ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.
ಕೊರೋನಾ ಸೋಂಕು ತಡೆಯಲು ರಾಜ್ಯದ ಜನತೆ ಇಷ್ಟು ದಿನ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಅದೇ ಸಹಕಾರ ನೀಡುವಂತೆ ಮನವಿ ಮಾಡುತ್ತೇನೆ. ಕಟ್ಟುನಿಟ್ಟಿನ ನಿಯಮ ಉಲ್ಲಂಘಿಸಿದರೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಹಾಟ್ ಸ್ಪಾಟ್ ಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಇನ್ನೂ ಮದ್ಯ ಮಾರಾಟದ ಬಗ್ಗೆ ಪ್ರಸ್ತಾಪಿಸಿದ ಅವರು, ನಾಳೆ ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿ ನೋಡಿಕೊಂಡು ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಕೊರೋನಾ ತಡೆಗೆ ಪ್ರಧಾನಿಯವರು ಇಂದು ನೀಡಿದ ಸಪ್ತಸೂತ್ರಗಳನ್ನು ಪಾಲಿಸುತ್ತೇವೆ. ರಾಜ್ಯದ ಜನತೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸಿಎಂ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.








