ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ಸಭೆ ನಡೆಯಲಿದೆ.
ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ಸಭೆ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಕಾರಣ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ನೀಡಿರುವ ಔಷಧಿಯ ಬಳಕೆ ಮಾಡಬೇಕೋ ಬೇಡವೋ ಅಥವಾ ಆಯುರ್ವೇದ ಔವಧಿಯನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧ ಬಳಕೆಗೆ ಸರ್ಕಾರಕ್ಕೆ ಸಲಹೆ ನೀಡುವ ಸಾಧ್ಯತೆ ಇದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು, ಡಿಸಿಎಂ ಅಶ್ವತ್ಥ ನಾರಾಯಣ, ಆರೋಗ್ಯ ಇಲಾಖೆ ಅಧಿಕಾರಿಗಳು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು, ತಜ್ಞರು ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಸರ್ಕಾರ ಹಾಗೂ ಬಿಬಿಎಂಪಿ ನೂತನ ಆಯುಕ್ತರು ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಣೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಮಾಡಲಾದ ಒಂದು ವಾರದ ಲಾಕ್‍ಡೌನ್‍ನಿಂದ ಆಗಿರುವ ಪ್ರಯೋಜನಗಳು, ಸಿದ್ದತೆ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ.
ಖಾಸಗಿ ಆಸ್ಪತ್ರೆಗಳು ನೀಡುವ ಶೇ.50ರಷ್ಟು ಹಾಸಿಗೆಗಳನ್ನು ಸೋಂಕಿತರಿಗೆ ಹಂಚಿಕೆ ಮಾಡುವುದು ಹಾಗೂ ಈಗಾಗಲೇ ಬೆಡ್ ಇಲ್ಲದೆ ಜನರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ನಾಳಿನ ಸಭೆಯಲ್ಲಿ ಚರ್ಚೆ ಆಗಲಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಹಾಗೂ ಸಲಹೆ, ನಿರ್ಧಾರಗಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟಾಸ್ಕ್ ಫೋರ್ಸ್ ಸಮಿತಿ ವಿವರಣೆ ನೀಡಲಿದೆ. ಟಾಸ್ಕ್ ಫೋರ್ಸ್ ಸಮಿತಿ ವರದಿ ಆಧರಿಸಿ ಮುಖ್ಯಮಂತ್ರಿಗಳು ಮುಂದಿನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.








