ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಎಂದೇ ಪ್ರಖ್ಯಾತಿ ಪಡೆದಿರುವ ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗ್. ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುವ ಪ್ರಭಾಸ್ ಅವರನ್ನು ಅಭಿಮಾನಿಗಳು ಡಾರ್ಲಿಂಗ್ ಎಂದೇ ಕರೆಯುತ್ತಾರೆ. ಸ್ವತಃ ಪ್ರಭಾಸ್ ಸಹ ತನ್ನ ಗೆಳೆಯರನ್ನು ಡಾರ್ಲಿಂಗ್ ಎಂದೇ ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ.
ಇದೀಗ ವಿಷಯ ಏನಂದರೇ ಪ್ರಭಾಸ್ ಜೊತೆ ಮೂರು ಸಿನಿಮಾಗಳಲ್ಲಿ ನಟಿಸಿರುವ ಮಿಲ್ಕಿ ಬ್ಯೂಟಿ ತಮನ್ನಾ, ಡಾರ್ಲಿಂಗ್ ಪ್ರಭಾಸ್ ಬಗ್ಗೆ ಕೆಲವು ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಟಾಲಿವುಡ್ ಸ್ಟಾರ್ ನಟಿ ತಮನ್ನಾ, ಪ್ರಭಾಸ್ ಜೊತೆ ರೆಬೆಲ್, ಬಾಹುಬಲಿ, ಬಾಹುಬಲಿ-2 ಸಿನಿಮಾಗಳಲ್ಲಿ ನಟಿಸಿದ್ದು, ಪ್ರಭಾಸ್ ಅನ್ನು ಬಹು ವರ್ಷಗಳಿಂದ ಬಲ್ಲವರು ಮತ್ತು ಉತ್ತಮ ಗೆಳತಿ ಕೂಡ.
ತಮನ್ನಾ ಇತ್ತೀಚಿಗೆ ನಡೆದ ಆನ್ ಲೈನ್ ಸಂದರ್ಶನದಲ್ಲಿ ಪ್ರಭಾಸ್ ಬಗ್ಗೆ ಮಾತನಾಡಿದ್ದು, ಬಾಹುಬಲಿಯ ಗುಟ್ಟು ರಟ್ಟು ಮಾಡಿದ್ದಾರೆ. ಸಂದರ್ಶನದಲ್ಲಿ ಪ್ರಭಾಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ‘ನಾನು ಈ ವರೆಗೆ ಕೆಲಸ ಮಾಡಿದ ವ್ಯಕ್ತಿಗಳಲ್ಲಿ ಪ್ರಭಾಸ್ ಅತ್ಯುತ್ತಮ ಮತ್ತು ಮೃದು ಸ್ವಭಾವದ ವ್ಯಕ್ತಿ’. ಪ್ರಭಾಸ್ ತುಸು ನಾಚಿಕೆ ಸ್ವಭಾವದ ವ್ಯಕ್ತಿ. ಅದರಲ್ಲಿಯೂ ಲೇಡಿ ಫ್ಯಾನ್ಸ್ ಗಳ ಜೊತೆಗಂತೂ ಬಹಳ ನಾಚಿಕೆಯಿಂದಲೇ ವ್ಯವಹರಿಸುತ್ತಾರೆ. ಆಗ ಅವರನ್ನು ನೋಡುವುದೇ ಚಂದ. ಲೇಡಿ ಫ್ಯಾನ್ಸ್ ಗಳ ಜೊತೆಗೆ ಅವರು ವ್ಯವಹರಿಸುವ ರೀತಿ ಬಹಳ ಕ್ಯೂಟ್ ಆಗಿರುತ್ತದೆ ಎಂದಿದ್ದಾರೆ ತಮನ್ನಾ.
ಇನ್ನು ತಮನ್ನಾ ಅವರ ಕೈಯಲ್ಲಿ ಹಲವು ಸಿನಿಮಾಗಳು ಪ್ರಸ್ತುತ ಇವೆ. ಸೀಟಿಮಾರ್, ದಟ್ ಈಸ್ ಮಹಾಲಕ್ಷ್ಮಿ, ಭೋಲೆ ಚೂಡಿಯಾ, ಕಾತ್ತು ಕರುಪ್ಪು, ಎನ್ ಎಂಡ್ರು ಕಾದಲ್ ಎನ್ಬೆನ್, ಚೋರ್ ನಿಕಲ್ ಕೆ ಭಾಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.








