TOP 10 NEWS – ಈ ದಿನದ ಪ್ರಮುಖ ಸುದ್ದಿಗಳು…!!
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೇಸ್ಟ್ ಮಾಡಿದ್ದಾರೆ. ಶಿವಮೊಗ್ಗದ ಬುದ್ಧನಗರ ನಿವಾಸಿ ಕಾಸಿಫ್ ( 30), ಜೆ.ಪಿ ನಗರ ನಿವಾಸಿ ಸೈಯದ್ ನದೀಮ್ (20), ಬಂಧಿತ ಆರೋಪಿಗಳು. ಕಾಸಿಫ್ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಸೈಯದ್ ನದೀಮ್ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ಗುರುತಿಸಲಾಗಿದೆ.
ಹಿಜಬ್ ಗಲಾಟೆಗೂ ಹರ್ಷನ ಕೊಲೆಗೂ ಸಂಬಂಧ ಇದೆ. ಎಸ್ಡಿಪಿಐ, ಪಿಎಫ್ಐ ಇಸ್ಲಾಂನ ದುಷ್ಟ ಶಕ್ತಿಗಳು ಈ ಕೊಲೆ ಹಿನ್ನೆಲೆಯ ಕಾರಣಕರ್ತರಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಅಲ್ಲದೆ ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ ಎಂದಿದ್ದಾರೆ.
ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡವರು, ಇನ್ನೂ ಹಿಂದೂಗಳ ಸಮಾಧಿಗೆ ಕಾರಣವಾಗುತ್ತಿದ್ದಾರೆ ಅಂದ್ರೆ ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗಗೆ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಖ್ಯಾತ ರೇಡಿಯೋ ನಿರೂಪಕಿ ಆರ್ ಜೆ ರಚನಾ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 39 ವರ್ಷದ ಆರ್ ಜೆ ರಚನಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ರಚನಾ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ.
ಇಂದು ವಿಧಾನಸಭೆಯಲ್ಲಿ ಸಚಿವರ ಸಂಬಳ, ನಿವೃತ್ತಿ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2022 ಮಂಡನೆಯಾಗಿ ಅಂಗೀಕಾರಗೊಂಡಿತು. ಈ ವಿಧೇಯಕದಿಂದ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷ, ಸಭಾಪತಿ, ಉಪ ಸಭಾಪತಿ, ಮುಖ್ಯಮಂತ್ರಿ, ಸಚಿವರು, ಪ್ರತಿಪಕ್ಷದ ನಾಯಕ, ಶಾಸಕರು ಹಾಗೂ ಸಚೇತಕರಿಗೂ ಸಂಬಳ, ಭತ್ಯೆ ಹೆಚ್ಚಳವಾಗಲಿದೆ.
ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಭಾರತ ಇಂದು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಲಿದೆ. ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ರವಾನೆಗೆ ಚಾಲನೆ ನೀಡಲಿದ್ದಾರೆ. ಭಾರತದ ಈ ನಡೆಗೆ ಅಫ್ಘಾನಿಸ್ತಾನದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
“ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾದರೆ ಒಂದು ಕೈಯಲ್ಲಿ ಅಭಿವೃದ್ಧಿ ಕೋಲು, ಇನ್ನೊಂದು ಕೈಯಲ್ಲಿ ಬುಲ್ಡೋಜರ್ ಇರುತ್ತದೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಜತೆಗೆ ಮಾಫಿಯಾ, ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಂದು ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.
ರಷ್ಯಾದ ಸೇನೆಯು ಉಕ್ರೇನ್‌ನ ಎರಡು ಪ್ರಾಂತ್ಯಗಳಾದ ಲುಹಾನ್ಸ್ಕ್-ಡೊನೆಟ್ಸ್ಕ್ ಗಳನ್ನ (ಡಾನ್‌ಬೋಸ್ ಪ್ರದೇಶ) ಪ್ರವೇಶಿಸಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 13 ಗಂಟೆಗಳ ಹಿಂದೆ (ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ) ಉಕ್ರೇನ್‌ನ ಈ ಎರಡು ರಾಜ್ಯಗಳನ್ನು ಸ್ವತಂತ್ರ ರಾಷ್ಟ್ರಗಳೆಂದು ಘೋಷಿಸಿದ್ದಾರೆ. ಇದರ ನಂತರ ರಷ್ಯಾದ ಸೈನ್ಯದ ಟ್ಯಾಂಕ್‌ಗಳು ಈ ಪ್ರದೇಶಗಳತ್ತ ಸಾಗಿವೆ.
ವಿಂಡೀಸ್ ವಿರುದ್ಧದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಮೇಲೆ ಟೀಂ ಇಂಡಿಯಾದ ಮಾಜಿ ಆಟಗಾರರ ವಾಸೀಂ ಜಾಫರ್ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಹೋಲಿಕೆ ಮಾಡಿದ್ರೆ ವೆಂಕಟೇಶ್ ಅಯ್ಯರ್ ಉತ್ತಮ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಮುಂದಿನ ಟಿ 20 ವಿಶ್ವಕಪ್ ತಂಡದಲ್ಲಿ ಖಂಡಿತವಾಗಿಯೂ ಸ್ಥಾನಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ತೆಲುಗು ಸಿನಿಮಾ ಲವರ್ಸ್ ಜಾತಕ ಪಕ್ಷಗಳಂತೆ ಕಾಯುತ್ತಿರುವ ಭೀಮ್ಲಾ ನಾಯಕ್ ಇದೇ ಫೆಬ್ರವರಿ 25 ರಂದು ಥಿಯೇಟರ್ ಅಂಗಳಕ್ಕೆ ಬರಲಿದೆ. ಟ್ರೈಲರ್ ನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಡೈಲಾಗ್ ಗಳು ಚಿಂದಿಯಾಗಿದೆ. ತಮನ್ ಮ್ಯೂಜಿಕ್ ಜೊತೆಗೆ ಪವನ್ ಕಲ್ಯಾಣ್, ರಾನಾ ಆಕ್ಟಿಂಗ್ ಸೂಪರ್ಬ್ ಎನ್ನುವಂತಿದೆ.








