Top 5 : ಪ್ರಮುಖ ರಾಷ್ಟ್ರೀಯ ಸುದ್ದಿಗಳು
ಪಿಎಂ ಗತಿಶಕ್ತಿ ಯೋಜನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ – ಮೋದಿ
ಪಿಎಂ ಗತಿಶಕ್ತಿ ಯೋಜನೆಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ವರ್ಚುವಲ್ ಮೂಲಕ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು.
ಈ ಬಾರಿ ಮಂಡನೆಯಾಗಿರುವ ಕೇಂದ್ರದ ಬಜೆಟ್ 21ನೇ ಶತಮಾನದ ವಿಕಾಸದ ಪ್ರತೀಕವಾಗಿದೆ. ಪಿಎಂ ಗತಿಶಕ್ತಿ ಯೋಜನೆ ಆರ್ಥಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ. ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ, ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಮೋದಿ ತಿಳಿಸಿದರು,
ಖಾಸಗಿ ಕೈಗಾರಿಕೆಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು, ಪ್ರಗತಿ ಸಾಧಿಸಬೇಕು. ರಾಜ್ಯ ಸರ್ಕಾರಗಳು ಸೂಕ್ತ ಯೋಜನೆ ರೂಪಿಸುವ ಮೂಲಕ ಪರಿಣಾಮಕಾರಿ ಅನುಷ್ಠಾನಗೊಳಿಸುವುದು ಅಗತ್ಯ ಎಂದರು.
ರಸ್ತೆ ಸಂಪರ್ಕಗಳನ್ನು ಜೋಡಿಸುವ ಮೂಲಕ ಸಾರಿಗೆ ವೆಚ್ಚವನ್ನು ಕಡಿಮೆಗೊಳಿಸಿ, ತಂತ್ರಜ್ಞಾನದ ಸಹಾಯದಿಂದ ಗುಣಮಟ್ಟದ ಸೇವೆ, ಸಮಯ ಉಳಿತಾಯ ಮಾಡುವುದು ಸಾಧ್ಯವಾಗಲಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದು ತಿಳಿಸಿದರು.
ಬಜೆಟ್ ಸಂವಾದ – ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಬಜೆಟ್ ನಲ್ಲಿ ಒತ್ತು – ಸೀತಾರಾಮನ್
ಚೆನೈನಲ್ಲಿ ಬಜೆಟ್ ಕುರಿತಂತೆ ಕೈಗಾರಿಕೋದ್ಯಮಿಗಳು ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭಾಗವಹಿಸಿದರು. ಸಂವಾದ ನಡೆಸುವುದರಿಂದ ಉಪಯುಕ್ತ ಮಾಹಿತಿ ದೊರಕಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಬಜೆಟೋತ್ತರ ಸಮಾವೇಶ ಉದ್ದೇಶಿಸಿ ಅವರು, ಸಾಂಕ್ರಾಮಿಕದ ಬಳಿಕ ಆರ್ಥಿಕತೆಗೆ ಸ್ಥಿರತೆ ಒದಗಿಸುವ, ನೀತಿಗಳನ್ನು ಮತ್ತು ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಮಂಡನೆಯಾದ ಕಳೆದ ಸಾಲಿನ ಬಜೆಟ್ ನ ಮುಂದುವರಿಕೆಯಾಗಿದೆ ಎಂದು ಹೇಳಿದರು. ಮೂಲಸೌಕರ್ಯಗಳ ಮೇಲಿನ ಹೂಡಿಕೆಯ ಹೆಚ್ಚಳದಿಂದ ದ್ವಿಗುಣ ಪರಿಣಾಮ ಪಡೆಯಬಹುದು ಎಂದು ತಿಳಿಸಿದರು.
ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆಯೂ ಚಿಂತಿಸಲಾಗಿದ್ದು, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದರು. ನಂತರ ನೇರ ಸಂವಾದದಲ್ಲಿ ಪಾಲ್ಗೊಂಡು, ಮಹಿಳೆಯರಲ್ಲಿ ಅಪಾರವಾದ ಕೌಶಲವಿದ್ದು, ಅದರ ಸಮರ್ಥ ಬಳಕೆಗೆ ಸಲಹೆ ನೀಡುವಂತೆ ತಿಳಿಸಿದರು.
ಉಕ್ರೇನ್ ಬಿಕ್ಕಟ್ಟು- ಮೋದಿಯವರಿಗೆ ಬೇಷರತ್ ಬೆಂಬಲ ನೀಡಿದ ಮಮತಾ ಬ್ಯಾನರ್ಜಿ
ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೇಷರತ್ ಬೆಂಬಲವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದಾರೆ. ಬಿಕ್ಕಟ್ಟಿನಿಂದ ಹೊರಬರಲು ರಾಷ್ಟ್ರೀಯ ಸಂಕಲ್ಪಕ್ಕಾಗಿ ಸರ್ವಪಕ್ಷ ಸಭೆಯನ್ನು ಕರೆಯುವ ಬಗ್ಗೆ ಪರಿಗಣಿಸುವಂತೆ ಮೋದಿಯನ್ನ ಒತ್ತಾಯಿಸಿದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಮತ್ತು ವಿಶೇಷವಾಗಿ “ಸಂಕಷ್ಟದಲ್ಲಿರುವ ನಮ್ಮ ವಿದ್ಯಾರ್ಥಿಗಳಿಗೆ ತ್ವರಿತ ಸಹಾಯ” ನೀಡುವಲ್ಲಿ ದೇಶವು ಒಗ್ಗಟ್ಟಿನಿಂದ ನಿಂತಿದೆ ಎಂದು ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ, ಭಾರತವು ಜಗತ್ತಿಗೆ ಶಾಂತಿಯುತ ಪರಿಹಾರವನ್ನು ನೀಡಲು ಮುಂದಾಗಬೇಕು ಮತ್ತು ನಾವು ಅದನ್ನು ಧೈರ್ಯದಿಂದ ಮತ್ತು ಹಿಂಜರಿಕೆಯಿಲ್ಲದೆ ನೀಡಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ.
“…ಭೀಕರ ಅಂತರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಲ್ಲಲು ನಮ್ಮ ದೇಶೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸುತ್ತೇವೆ. ಒಂದು ರಾಷ್ಟ್ರವಾಗಿ ನಮ್ಮ ಘನತೆ ಅವಿರೋಧ ಮತ್ತು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನಾವು ಇದನ್ನು ಮಾಡುತ್ತೇವೆ.
ನಾವು ನಮ್ಮ ವಿದೇಶಾಂಗ ವ್ಯವಹಾರಗಳನ್ನು ನಡೆಸುವ ತತ್ವಗಳು ಜಾಗತಿಕ ರಂಗದಲ್ಲಿ ಸ್ಥಿರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಇದನ್ನು ಮಾಡುತ್ತೇವೆ, ”ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಟಿಎಂಸಿ ಮುಖ್ಯಸ್ಥರಾಗಿರುವ ಮಮತ ಬ್ಯಾನರ್ಜಿ ಅವರು ಹಿರಿಯ ಮುಖ್ಯಮಂತ್ರಿಯಾಗಿ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷದ ನಾಯಕರಾಗಿ “ಉಕ್ರೇನ್ ಯುದ್ಧದ ಪ್ರಸ್ತುತ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ” ಎಂದು ಹೇಳಿದರು.
ಉಕ್ರೇನ್ ಬಿಕ್ಕಟ್ಟು – ಭಾರತೀಯರನ್ನ ಕರೆತರಲು ವಿಮಾನ ಕಳುಹಿಸಿದ ಸ್ಪೈಸ್ ಜೆಟ್
ರಷ್ಯಾದ ಸೇನಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಸ್ಪೈಸ್‌ಜೆಟ್ ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ಗೆ ವಿಶೇಷ ವಿಮಾನವನ್ನು ಕಳುಹಿಸಿಕೊಡಲಿದೆ.
ಫೆಬ್ರವರಿ 24 ರಿಂದ ಮಿಲಿಟರಿ ದಾಳಿ ಪ್ರಾರಂಭವಾದಾಗಿನಿಂದ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಹಾಗಾಗಿ ಉಕ್ರೇನ್‌ನೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳು, ರೊಮೇನಿಯಾ ಮತ್ತು ಹಂಗೇರಿಯಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಶನಿವಾರದಿಂದ ಪ್ರಾರಂಭಿಸಿದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಇದುವರೆಗೆ ಐದು ವಿಮಾನಗಳಲ್ಲಿ ಒಟ್ಟು 1,156 ಭಾರತೀಯ ಪ್ರಜೆಗಳನ್ನು ಕರೆತಂದಿದೆ.
240 ಭಾರತೀಯ ಪ್ರಜೆಗಳನ್ನ ಹೊತ್ತ ಆರನೇ ವಿಮಾನ ಸೋಮವಾರ ಸಂಜೆ ದೆಹಲಿಗೆ ಇಳಿಯಲಿದೆ. ಸುಮಾರು 14,000 ಭಾರತೀಯರು, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು, ಪ್ರಸ್ತುತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸೋಮವಾರ ಸಂಜೆ ದೆಹಲಿಯಿಂದ ಹೊರಡಲಿರುವ ಈ ವಿಶೇಷ ವಿಮಾನಕ್ಕೆ ತನ್ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಬಳಸುವುದಾಗಿ ಸ್ಪೈಸ್ ಜೆಟ್ ತಿಳಿಸಿದೆ.
“ವಿಮಾನವು ದೆಹಲಿಯಿಂದ ಬುಡಾಪೆಸ್ಟ್‌ಗೆ ಹಾರಲಿದೆ, ಹಿಂತಿರುಗುವ ವಿಮಾನವು ಜಾರ್ಜಿಯಾದ ಕುಟೈಸಿ ಮೂಲಕ ಕಾರ್ಯನಿರ್ವಹಿಸುತ್ತದೆ” ಎಂದು ಸ್ಪೈಸ್ ಜೆಟ್ ಹೇಳಿದೆ. ವಿದ್ಯಾರ್ಥಿಗಳನ್ನ ಕರೆತರಲು ಹೆಚ್ಚಿನ ವಿಮಾನಗಳನ್ನು ನಿರ್ವಹಿಸಲು ಯೋಜಿಸುತ್ತಿದೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ.
UKRAINE | ಮಗನ ಚಿಂತೆಯಲ್ಲಿ ಪ್ರಾಣ ಬಿಟ್ಟ ತಾಯಿ
ಮಗನ ಚಿಂತೆಯಲ್ಲಿ ಪ್ರಾಣ ಬಿಟ್ಟ ತಾಯಿ
ತಮಿಳುನಾಡಿನ ತಿರುಪತ್ತೂರಲ್ಲಿ ಘಟನೆ
ಪುದೂರಿನ ಶಶಿಕಲಾ ಮೃತ ಮಹಿಳೆ
ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಮಗ
ಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆ
ತಿರುಪತ್ತೂರ್ : ಉಕ್ರೇನ್ ನಲ್ಲಿ ಮಗ ಸಿಲುಕೊಂಡಿರುವ ಚಿಂತೆಯಲ್ಲಿ ತಾಯಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯ ಪುದೂರಿನಲ್ಲಿ ನಡೆದಿದೆ. ಶಶಿಕಲಾ ಮೃತ ದುರ್ದೈವಿಯಾಗಿದ್ದಾರೆ.
ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಅಂದಾಜು 13 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ.
ಅದರಂತೆ ಶಶಿಕಲಾ ಅವರ ಮಗ ಶಕ್ತಿವೆಲ್ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಇತ್ತ ಮೊದಲೇ ಬಿಪಿ ಮತ್ತು ಡಯಾಬಿಟಿಸ್ನಿಂದ ಬಳಲುತ್ತಿದ್ದ ಶಶಿಕಲಾ ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ಬಳಿಕ ಮಗನ ಪರಿಸ್ಥಿತಿ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದರು.
ಅದೇ ಚಿಂತೆಯಲ್ಲಿದ್ದ ಶಶಿಕಲಾ ಅವರು ಫೆಬ್ರವರಿ ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಶಿಕಲಾ ಅವರು ಮೃತಪಟ್ಟಿದ್ದಾರೆ.
ಸದ್ಯ ಉಕ್ರೇನ್ ನಲ್ಲಿರುವ ಶಕ್ತಿವೆಲ್, ವಿಡಿಯೋ ಕಾಲ್ ನಲ್ಲಿಯೇ ತಾಯಿ ಅಂತಿಮ ದರ್ಶನ ಪಡೆದಿದ್ದಾರೆ.