ದಾವಣಗೆರೆ: ವ್ಯಕ್ತಿಯೊಬ್ಬ ವರದಕ್ಷಿಣೆ (Dowry Case) ತರುವಂತೆ ಚಿತ್ರಹಿಂಸೆ ನೀಡಿ ಮೂರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಈ ಘಟನೆ ಚನ್ನರಾಯಪಟ್ಟಣ (Channarayapatna) ನೊರನಕ್ಕಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ನಯನ (24) ಎಂದು ಗುರುತಿಸಲಾಗಿದೆ. ಪತಿ ಅಯ್ಯಪ್ಪ ಕೊಲೆಗೈದ ಆರೋಪಿ. ಕೊಲೆಯ ನಂತರ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೂರು ವರ್ಷಗಳ ಹಿಂದೆ ನೊರನಕ್ಕಿ ಗ್ರಾಮದ ಅಯ್ಯಪ್ಪ ಹಾಗೂ ನಯನ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಮಗು ಇದೆ. ಈಗ ಪತ್ನಿ ಗರ್ಭಿಣಿಯಾಗಿದ್ದರು. ಆದರೆ, ಇತ್ತೀಚೆಗೆ ಆರೋಪಿ, ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಹೀಗಾಗಿ ಹಲವು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿದೆ. ಆದರೂ ಪ್ರಯೋಜನವಾಗಿಲ್ಲ.
ಈ ನಡುವೆ ನಯನ ಗರ್ಭಿಣಿಯಾಗಿದ್ದರಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ನ.17 ರ ರಾತ್ರಿ ಅಯ್ಯಪ್ಪ, ಮಾವನ ಮನೆಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ನಯನಾಳನ್ನು ಮಲ್ಲಪ್ಪನ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.