ಕಲಬುರಗಿ : ಲಾಕ್ ಡೌನ್ ನಿಂದಾಗಿ ಸಾರಿಗೆ ಇಲಾಖೆಗೆ ಎರಡು ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಆದರೆ ಸಧ್ಯಕ್ಕೆ ಬಸ್ ದರ ಏರಿಕೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕಲಬುರುಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಹಸಿರು ವಲಯದಲ್ಲಿ ಬಸ್ ಸಂಚಾರ ಆರಂಭ ಮಾಡಿದ್ದೇವೆ. ನಾಳೆಯಿಂದ ಹೋಬಳಿ ಮಟ್ಟದಲ್ಲಿ ಬಸ್ ಸಂಚಾರ ಮಾಡಲು ಪ್ಲಾನ್ ಮಾಡಿದ್ದೇವೆ. ಎಲ್ಲಾ ಇಲಾಖೆಗಳಿಗಿಂತ ಸಾರಿಗೆ ಇಲಾಖೆಗೆ ಹೆಚ್ಚು ನಷ್ಟವಾಗಿದೆ. ಲಾಕ್ ಡೌನ್ ನಿಂದ ಎರಡು ಸಾವಿರ ಕೋಟಿಗೂ ಹೆಚ್ಚು ಸಾರಿಗೆ ಇಲಾಖೆಗೆ ನಷ್ಟವಾಗಿದೆ. 3 ಸಾವಿರ ಕೋಟಿಗೂ ಅಧಿಕ ನಷ್ಟವಾಗುವ ಸಂಭವವಿದೆ.
ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಕೊರೊನಾಕ್ಕೆ ಹೆದರಿ ಜನ ಬಸ್ ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಾ ತರಹದ ಬಸ್ ಸಂಚಾರಕ್ಕೆ ಬುಕ್ಕಿಂಗ್ ಪ್ರಾರಂಭಕ್ಕೆ ಆದೇಶ ಮಾಡಲಾಗಿದೆ. ಮಹಾರಾಷ್ಟ್ರ ಹೊರತು ಪಡಿಸಿ ಎಲ್ಲಾ ಕಡೆ ಬಸ್ ಸಂಚಾರಕ್ಕೆ ಸಿದ್ಧತೆ ನಡೆಯುತ್ತಿದೆ.
ನಮ್ಮ ಜೀವ ಮತ್ತು ನಮ್ಮ ಜೀವನ ಎರಡರೊಂದಿಗೆ ಜೀವನ ಮಾಡಬೇಕಾಗಿದೆ. ಪ್ರತಿ ದಿನ ಐದರಿಂದ ಆರು ಕೋಟಿ ನಷ್ಟ ಆದರೂ ಸಂಚಾರ ಆರಂಭ ಮಾಡಿದ್ದೇವೆ. ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಜೀವ ಹಾನಿ ಆದರೆ 30 ಲಕ್ಷ ಪರಿಹಾರ ನೀಡುತ್ತವೆ. ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೇಯಲು ಸರ್ಕಾರ ಸಿದ್ದವಿಲ್ಲ. ಹಾಗಾಗಿ ಸಧ್ಯಕ್ಕೆ ಬಸ್ ದರ ಏರಿಕೆ ಮಾಡುವುದಿಲ್ಲ. 652 ಕೋಟಿ ಸರಕಾರದಿಂದ ಹಣ ಪಡೆದು ಸಿಬಂಧಿಗೆ ಸಂಬಳ ಕೊಡುತ್ತಿದ್ದೇವೆ. ಸಾರಿಗೆ ಸಿಬಂಧಿಯ ಸಂಬಳ ಕಡಿತ ಮಾಡುವುದಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.








