ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ಡಿ. 31 ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಸಭೆಯ ನಂತರ ಮುಷ್ಕರ ಹಿಂಪಡೆದಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ ಬೆನ್ನಲ್ಲೇ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಹೀಗಾಗಿ ಡಿ.31ರಂದು ಎಂದಿನಂತೆ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗೆ ಇಳಿಯಲಿವೆ.
38 ತಿಂಗಳ ಹರಿಯರ್ಸ್ ಹಣ, 2024ರ ಜನವರಿಯಿಂದ ವೇತನ ಹೆಚ್ಚಳ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಹೋರಾಟಕ್ಕೆ ಕರೆ ನೀಡಲಾಗಿತ್ತು. ಡಿ. 31 ರ ಮಂಗಳವಾರ ಬೆಳಿಗ್ಗೆ 6 ರಿಂದ ಸಾರಿಗೆ ಸಂಸ್ಥೆ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳನ್ನು ನಿಲ್ಲಿಸಿ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಂಡಿತ್ತು. ಆದರೆ, ಸಿಎಂ ನೇತೃತ್ವದಲ್ಲಿ ಸಭೆ ನಡೆದ ನಂತರ ಹೋರಾಟ ಹಿಂಪಡೆಯಲಾಗಿದೆ.
ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಡಿ. 31 ರಂದು ಜಂಟಿ ಕ್ರಿಯಾ ಸಮಿತಿಯವರು ವಿವಿಧ ಬೇಡಿಕೆಯನ್ನಿಟ್ಟು ಮುಷ್ಕರ ಮಾಡಲು ಮುಂದಾಗಿದ್ದರು. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 5900 ಕೋಟಿ ರೂ. ಸಾಲ ಇಟ್ಟು ಹೋಗಿದ್ದಾರೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ನೌಕರರ ಬೇಡಿಕೆಯನ್ನು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. 11 ಸಾವಿರ ನೌಕರರಿಗೆ ಬಾಕಿಯಿದ್ದ 220 ಕೋಟಿ ಬಿಡುಗಡೆ ಮಾಡಿದ್ದಾರೆ. ಈಗ ಮತ್ತೆ ಎರಡು ಸಾವಿರ ಕೋಟಿ ರೂ. ಸಿಎಂ ಬಿಡುಗಡೆ ಮಾಡಿದ್ದಾರೆ. ಆ ಹಣ ಬಂದರೆ ಸಮಸ್ಯೆ ಪರಿಹಾರ ಆಗುತ್ತದೆ. ವೇತನ ಪರಿಷ್ಕರಣೆ ಬಗ್ಗೆ ಕೂಡ ಸಿಎಂ ಗೆ ಹೇಳಿದ್ದೇವೆ. ಹೀಗಾಗಿ ಹೋರಾಟಗಾರರು ತಮ್ಮ ಹೋರಾಟ ಹಿಂಪಡೆದಿದ್ದಾರೆ ಎಂದಿದ್ದಾರೆ.








