ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ನಡೆದ ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯಗೊಂಡಿದೆ. ಆದರೆ, ಈ ನಾಲ್ಕು ದಿನಗಳ ನಡುವೆ ಸಮರ ನಡೆದ್ದು ಸರ್ಕಾರ ವ/ಸ ಸಾರಿಗೆ ನೌಕರರು ಆಗುವ ಬದಲು ಸರ್ಕಾರ ವ/ಸ ಕೋಡಿಹಳ್ಳಿ ಚಂದ್ರಶೇಖರ್ ಎಂಬಂತಾಗಿದೆ.
ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತ ವಿರೋಧಿ ಎಂದು ಆರೋಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಸರಣಿ ಪ್ರತಿಭಟನೆಗಳಿಂದಾಗಿ ಬೆಂಗಳೂರು ನಗರದ ಜನತೆ ಹೈರಾಣಾಗಿ ಹೋಗಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸಿದ್ದ ಕೋಡಿಹಳ್ಳಿ ಚಂದ್ರಶೇಖರ್, ಮಾರನೇ ದಿನವೇ ಸಾರಿಗೆ ನೌಕರರು ಆರಂಭಿಸಿದ ಮುಷ್ಕರದ ನೇತೃತ್ವ ವಹಿಸಿದ್ದರು. ಆರಂಭದಲ್ಲಿ ಸರ್ಕಾರ ಹಾಗೂ ಸಚಿವರು ನೌಕರರ ಮುಷ್ಕರ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ತಾತ್ಸಾರದ ತಳೆದಿದ್ದರು. ಆದರೆ, ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸರ್ಕಾರಕ್ಕೆ ಬಿಸಿತಟ್ಟಲು ಶುರುವಾಯಿತು. ಇದೇ ವೇಳೆ ಕಾಂಗ್ರೆಸ್ ನಾಯಕರು ಕೂಡ ಸಾರಿಗೆ ನೌಕರರ ಮುಷ್ಕರಕ್ಕೆ ಬಂಬಲ ಕೊಟ್ಟಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಾಯಿತು. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕೋಡಿಹಳ್ಳಿ ವಿರುದ್ಧ ಕೆಂಡಾಮಂಡಲರಾಗಿದ್ದರು.
ಸಾರಿಗೆ ನೌಕರರ ಮುಷ್ಕರವನ್ನು ಕೋಡಿಹಳ್ಳಿ ಚಂದ್ರಶೇಖರ್ ಈ ಮಟ್ಟಕ್ಕೆ ಕೊಂಡೊಯ್ಯುತ್ತಾರೆಂಬ ಕಲ್ಪನೆ ಸರ್ಕಾರಕ್ಕಿಲ್ಲದ ಪರಿಣಾಮ ನಾಲ್ಕು ದಿನಕ್ಕೆ ಬಂದು ಸರ್ಕಾರದ ಬುಡವನ್ನೇ ಅಲ್ಲಾಡಿಸುವಂತೆ ಮಾಡಿತು. ಹೀಗಾಗಿ ಸಮಸ್ಯೆಯನ್ನು ಸುಲಭವಾಗಿ ಬರೆಹರಿಸುವ ಬದಲು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮುಗಿಬಿದ್ದಿದ್ದು ಗಮನಾರ್ಹವಾಗಿದೆ.
ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನ್ ಸಂಬಂಧ: ಶೋಭಾ ಕಿಡಿ
ಕೋಡಿಹಳ್ಳಿ ಚಂದ್ರಶೇಖರ್ ರೈತರ ಬಗ್ಗೆ ಹೋರಾಟ ಮಾಡುವ ಬಗ್ಗೆ ನಮಗೆ ಗೌರವ ಇದೆ, ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಎನು ಸಂಬಂಧ, ಸಾರಿಗೆ ನೌಕರರ ಹೋರಾಟದಲ್ಲಿ ಖಾಸಗಿ ವ್ಯಕ್ತಿ ಬೇಡಿಕೆ ಇಡುತ್ತಾರೆ ಅಂದ್ರೆ ಎಲ್ಲವೂ ಸಂಶಯಕ್ಕೆ ದಾರಿಕೊಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಶಂಕೆ ವ್ಯಕ್ತಪಡಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಹೋರಾಟದಲ್ಲಿ ರಾಜಕೀಯ ವಾಸನೆ ಇದೆ. ಇದರ ಹಿಂದೆ ಕಾಂಗ್ರೆಸ್ ಇರುವ ಭಯ ಹಾಗೂ ಸಂಶಯ ನನಗೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಡಿ `ಹುಳಿ’ ಎಂದ ಸಿ.ಟಿ ರವಿ
ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೋಡಿ `ಹುಳಿ’ ಎಂದು ಕಿಡಿಕಾರಿದ್ದಾರೆ.
`
ಸಾರಿಗೆ ನೌಕರರ ನಡುವೆ ಹುಳಿ ಹಿಂಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಕೋಡಿಹಳ್ಳಿ ಚಂದ್ರಶೇಖರ್ ಮೂಲಕ ಪ್ರಯತ್ನಿಸುತ್ತಿದ್ದಾರೆ. ಕೋಡಿ `ಹುಳಿ’ಯನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್‍ನ ಕೆಲವು ನಾಯಕರ ಕನಸು ಕನಸಾಗಿಯೇ ಉಳಿಯಲಿದೆ ಎಂದು ಸಿ.ಟಿ ರವಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಡಿಹಳ್ಳಿ ಮೂಗು ತೂರಿಸುತ್ತಿದ್ದಾರೆ: ಎಸ್.ಟಿ ಸೋಮಶೇಖರ್
ಸಾರಿಗೆ ನೌಕರರ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮೂಗು ತೂರಿಸುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಆರೋಪಿಸಿದ್ದಾರೆ.
ಕೋಡಿಹಳ್ಳಿ ಯಾವ ನಾಟಕವಾಡಿದರೂ ಜನರಿಗೆ ಅರ್ಥವಾಗುತ್ತದೆ. ಡ್ರಾಮಾ ಬಿಟ್ಟು 9 ಬೇಡಿಕೆ ಈಡೇರಿಸಿದ್ದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸಬೇಕಿತ್ತು ಎಂದಿದ್ದಾರೆ.
ಕೋಡಿಹಳ್ಳಿ ಯಾರು: ಲಕ್ಷ್ಮಣ ಸವದಿ
ಸಾರಿಗೆ ನೌಕರರು ಮುಷ್ಕರ ಆರಂಭಿಸಿದ ದಿನದಿಂದಲೂ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಡಿಸಿಎಂ ಲಕ್ಷ್ಮಣ ಸವದಿ, ಕೋಡಿಹಳ್ಳಿ ಪ್ರತಿಭಟನೆ ಹಿಂದೆ ರಾಜಕೀಯ ಕೈವಾಡವಿದೆ. ಕೋಡಿಹಳ್ಳಿ ಜತೆ ನಾವ್ಯಾಕೆ ಮಾತನಾಡಬೇಕು, ನಮ್ಮ ನೌಕರರ ಜತೆ ನಾವು ಮಾತನಾಡುತ್ತೇವೆ. ಕೋಡಿಹಳ್ಳಿ ಯಾರು ಎಂದು ಪ್ರಶ್ನಿಸಿದ್ದಾರೆ.
ಕೋಡಿಹಳ್ಳಿ ಡಬಲ್ ಗೇಮ್: ಆರ್.ಅಶೋಕ್
ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಡಬಲ್ ಗೇಮ್ ಆಡುತ್ತಿದ್ದಾರೆ. ಸಾರಿಗೆ ನೌಕರರು ಒಪ್ಪಿದ್ದರೂ ಕೋಡಿಹಳ್ಳಿ ಒಪ್ಪುತ್ತಿಲ್ಲ. ಮುಷ್ಕರದಿಂದ ಯಾರಿಗಾದರೂ ತೊಂದರೆ ಆದರೆ ಕೋಡಿಹಳ್ಳಿಯನ್ನೇ ಹೊಣೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ರೊಚ್ಚಿಗೆದ್ದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








