ಏಪ್ರಿಲ್ 7ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಬೆಂಗಳೂರು (Bangalore ) : ಸಾರಿಗೆ ನೌಕರರ 9 ಬೇಡಿಕೆಗಳು ಈಡೇರಿಸದ ಹಿನ್ನೆಲೆ ಏಪ್ರಿಲ್ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಕಾರ್ಮಿಕ ಕಾನೂನಿನ ಪ್ರಕಾರ 22 ದಿನಗಳ ಮುನ್ನ ಮುಷ್ಕರದ ನೋಟಿಸ್ ನೀಡಬೇಕು. ಈ ಹಿನ್ನಲೆ ಮುಖ್ಯಮಂತ್ರಿ, ಸಾರಿಗೆ ಸಚಿವ, ನಾಲ್ಕು ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮುಷ್ಕರದ ನೋಟಿಸ್ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರೆಶೇಖರ್ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ಸತ್ಯಾಗ್ರಹ ಸಂದರ್ಭದಲ್ಲಿ ನಮ್ಮ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಬೇಡಿಕೆಗಳನ್ನ ಈಡೇರಿಸಲು ಸರ್ಕಾರಕ್ಕೆ ನಾವು 3 ತಿಂಗಳ ಗಡವು ಕೊಟ್ಟಿದ್ದೇವು. ಆ ಗಡುವು ಈಗ ಮುಕ್ತಾಯವಾಗಿದ್ದು, ಕಾರ್ಮಿಕ ಇಲಾಖೆಗೆ ಎಲ್ಲಾ ನಿಗಮಗಳ ಎಂಡಿಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ನೋಟಿಸ್ ನೀಡಿದ 22 ದಿನಗಳ ಬಳಗೆ ಆರನೇ ವೇತನ ನಮ್ಮ ಎಲ್ಲಾ ಬೇಡಿಕೆಗಳು ಈಡೇರಿಸಬೇಕು. ಇಲ್ಲವಾದಲ್ಲಿ ಏಪ್ರಿಲ್ 7ರಿಂದ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.