ಗಾನಗಂಧರ್ವ ಎಸ್.ಪಿ.ಬಿ ಮೃತ್ಯುಂಜಯರಾಗಲೆಂದು, ಶಂಕರ್ ಮಹದೇವನ್ ನೇತೃತ್ವದಲ್ಲಿ ಸಂಗೀತ ಕಲಾವಿದರಿಂದ ವಿಶೇಷ ಗಾಯನ ಪ್ರಾರ್ಥನೆ ಫೇಸ್ ಬುಕ್ ಲೈವ್:

ತಮ್ಮ ಸ್ವರದ ಜೇನಿನಂತಹ ಮಾಧುರ್ಯದಿಂದಲೇ ಭಾರತವಷ್ಟೇ ಅಲ್ಲ ಇಡೀ ಪ್ರಪಂಚದ ಸಂಗೀತ ಪ್ರೇಮಿಗಳ ಮನಗೆದ್ದಿರುವ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗಾಗಿ ಪ್ರಪಂಚದಾದ್ಯಂತ ಇರುವ ಸಂಗೀತಗಾರರು, ಹಾಡುಗಾರರು ಇಂದು ಸಂಜೆ 6 ಗಂಟೆಗೆ ಒಂದು ಹಾಡಿನ ಟ್ರಿಬ್ಯೂಟ್ ಸಲ್ಲಿಸಲಿದ್ದಾರೆ. 
ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೋನಾ ಬಾಧಿಸುತ್ತಿದ್ದು, ಅವರನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಶೀಘ್ರ ಗುಣಮುಖರಾಗುವಂತೆ ಕೋರಿಕೆ ಸಲ್ಲಿಸುತ್ತಾ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಫೇಸ್ ಬುಕ್ ಲೈವ್ ನಲ್ಲಿ ಪ್ರಸಾರವಾಗಲಿದೆ.

ಬಹುಶಃ ಹಿಂದೆಂದೂ, ಇನ್ಯಾವ ಗಾಯಕನಿಗೂ ಇಂಥದ್ದೊಂದು ಗೌರವ ಪ್ರಾಪ್ತಿಯಾಗಿರಲಿಲ್ಲ. ಎಸ್ ಪಿ. ಬಿ ಇಂಥದ್ದೊಂದು ಗೌರವಕ್ಕೆ ಪಾತ್ರರಾಗುತ್ತಿದ್ದಾರೆ ಎಂದರೆ, ಅದಕ್ಕೆ ಅವರು ಜನಮಾನಸದಲ್ಲಿ ಗಳಿಸಿರುವ ಸ್ಥಾನ ಅಂಥದ್ದು. ತಮ್ಮ ಸ್ವರ ಮಾಧುರ್ಯದಿಂದ ಮಾತ್ರವಲ್ಲ, ಸಜ್ಜನಿಕೆ, ವಿನಯಶೀಲವಾದ ಮಾತುಗಳು, ಪ್ರೀತಿ ಎಸ್ ಪಿ ಬಿಯವರ ದೊಡ್ಡ ಶಕ್ತಿಯಾಗಿ ನಿಂತಿದೆ. ಎಸ್ ಪಿ.ಬಿ. ಶೀಘ್ರ ಗುಣಮುಖರಾಗಿ ನಮ್ಮೊಡನೆ ಇನ್ನೂ ನೂರು ಕಾಲ ಹಾಡುತ್ತಾ, ನಲಿಯುತ್ತಾ ಇರಲಿ ಎಂದು ನಾವೂ ಕೂಡ ಹಾರೈಸೋಣ.









