ಹೊಸದಿಲ್ಲಿ, ಮೇ 19 : ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಚೀನಾ ಮೂಲದ ‘ಟಿಕ್ ಟಾಕ್’ ಎಂಬ ವಿಡಿಯೊ ಸಾಮಾಜಿಕ ಜಾಲತಾಣದ ಮೇಲೆ ಭಾರತೀಯರ ಕೆಂಗಣ್ಣು ಬಿದ್ದಿದೆ. ಟಿಕ್ ಟಾಕ್ ವಿರುದ್ಧ ನೆಟ್ಟಿಗರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದಲ್ಲಿ ಟಿಕ್ ಟಾಕ್ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಟಿಕ್ಟಾಕ್ ಬದಲು ಜನರು ಯ್ಯೂಟೂಬ್ ಮೊರೆ ಹೋಗುತ್ತಿದ್ದು, #BringBackcarryMinatiyoutubeVideo ಅಭಿಯಾನವೂ ಆರಂಭಗೊಂಡಿದೆ ಮತ್ತು ಯ್ಯೂಟೂಬ್ ಬಳಕೆದಾರರ ಸಂಖ್ಯೆ ಮತ್ತು ವೀಕ್ಷಣೆಯೂ ಹೆಚ್ಚಾಗುತ್ತಿದೆ. ಟಿಕ್ ಟಾಕ್ ನಿಷೇಧಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಒತ್ತಾಯ ಕೇಳಿಬರುತ್ತಿದ್ದು, ಟ್ವಿಟ್ಟರ್ನಲ್ಲಿ #tiktokexposed, #BanTikToklnlndia ಹ್ಯಾಷ್ಟ್ಯಾಗ್ಗಳ ಟ್ರೆಂಡ್ ಸೃಷ್ಟಿಯಾಗಿದೆ.
ಟಿಕ್ ಟಾಕ್ ನಲ್ಲಿ ಮಹಿಳೆಯರು, ಮಕ್ಕಳು, ಪ್ರಾಣಿಗಳ ಮೇಲಿನ ದೌರ್ಜನ್ಯದ ಕುರಿತಾದ ವಿಡಿಯೋಗಳು ಹರಿದಾಡುತ್ತಿದ್ದು, ಭಾರತದ ಮಹಿಳಾ ಆಯೋಗವು ಮಹಿಳಾ ದೌರ್ಜನ್ಯದ ವಿಡಿಯೋವನ್ನು ತೆಗೆಯುವಂತೆ ಟಿಕ್ ಟಾಕ್ ಗೆ ಸೂಚಿಸಿದೆ. ಅಲ್ಲದೆ ಮಹಾರಾಷ್ಟ್ರ ಪೊಲೀಸರಿಗೆ ಆ ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ.
ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿರುವ ಹಾಗೂ ಟ್ವಿಟರ್ ನಲ್ಲಿ ಶೇರ್ ಮಾಡಿರುವ ಮಹಿಳಾ ದೌರ್ಜನ್ಯದ ವಿಡಿಯೋದಲ್ಲಿ ಆ್ಯಸಿಡ್ ದಾಳಿಯನ್ನು ವೈಭವೀಕರಿಸಿದ ದೃಶ್ಯಗಳಿದ್ದು, ಇದು ಹಿಂಸಾಚಾರದ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ವಿಡಿಯೋ ತಯಾರಿಸಿರುವ ಫೈಜಲ್ ಸಿದ್ದಿಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಮಹಿಳಾ ಆಯೋಗವು ಒತ್ತಾಯಿಸಿದ್ದು, ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ ಎಂದು ಹೇಳಿದೆ.
ಟಿಕ್ ಟಾಕ್ನಿಂದಲೇ ಫೇಮಸ್ ಆಗಿ 13 ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಫೈಜಲ್ ಸಿದ್ದಿಕಿ, ಅಕೌಂಟ್ನ್ನು ಟಿಕ್ಟಾಕ್ ಅಮಾನತುಗೊಳಿಸಿದೆ. ಆತ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ವಿಕೃತವಾಗಿ ಮೇಕಪ್ ಮಾಡಿಕೊಂಡ ಹುಡುಗಿಯೊಬ್ಬಳು ಲವ್ ಬ್ರೇಕಪ್ ಮಾಡಿಕೊಂಡಿರುತ್ತಾಳೆ. ಆಗ ಒಬ್ಬ ವ್ಯಕ್ತಿ ಅವನಿಗೋಸ್ಕರ
ಅಲ್ಲವೇ ನೀನು ನನ್ನನ್ನು ಬಿಟ್ಟಿದ್ದು ಎಂದು ಮುಖಕ್ಕೆ ಲಿಕ್ವಿಡ್ ಎಸೆಯುತ್ತಾನೆ. ಆದರೆ ಇದು ಆತ ನಿಜವಾಗಲೂ ಆಸಿಡ್ ಎಸೆಯುವಂತೆ ಕಾಣುತ್ತಿದೆ. ಇದರ ಜೊತೆಗೆ ಅಶ್ಲೀಲ ವಿಡಿಯೋ ಗಳು ಕೂಡ ಟಿಕ್ ಟಾಕ್ ನಲ್ಲಿ ಪೋಸ್ಟ್ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #BanTikToklnlndia, #tiktokexposed ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅದು ಟ್ರೆಂಡ್ ಆಗುತ್ತಿದೆ. ಇಲ್ಲಿಯವರೆಗೂ #tiktokexposed ಹ್ಯಾಷ್ಟ್ಯಾಗ್ ಅಡಿಯಲ್ಲಿ ನೆಟ್ಟಿಗರು 26.8 ಸಾವಿರ ಟ್ವೀಟ್ಗಳನ್ನು ಮಾಡಿದ್ದಾರೆ. ಇನ್ನು ಟ್ವಿಟ್ಟರ್ನಲ್ಲಿ #BanTikToklnlndia ನಿನ್ನೆಯಿಂದಲೂ ಟ್ರೆಂಡ್ನಲ್ಲಿದ್ದು, 1.86 ಲಕ್ಷಕ್ಕೂ ಹೆಚ್ಚಿನ ಟ್ವೀಟ್ಗಳು ಇದೇ ವಿಷಯವನ್ನು ಚರ್ಚೆ ಮಾಡಿವೆ.
ಟಿಕ್ ಟಾಕ್ ನಲ್ಲಿ ಹಿಂಸಾಚಾರ, ತಾರತಮ್ಯ ನೀತಿಗೆ ಸಂಬಂಧಿಸಿದಂತೆ, ಪ್ರಾಣಿಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕುರಿತಂತೆ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದೆ.ಆದ್ದರಿಂದ ಅದನ್ನು ನಿಷೇಧಿಸಬೇಕು ಎಂದು ನೆಟ್ಟಿಗರ ಆಗ್ರಹಿಸುತ್ತಿದ್ದಾರೆ. ಟಿಕ್ಟಾಕ್ ಅನ್ನು ನಿಷೇಧಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಈ ಅಭಿಯಾನದಿಂದಾಗಿ ಕೆಲವು ದಿನಗಳಿಂದ ಟಿಕ್ಟಾಕ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಪ್ಲೇ ಸ್ಟೋರ್ನಲ್ಲಿ 4.6 ರೇಟಿಂಗ್ ನಲ್ಲಿದ್ದ ಟಿಕ್ ಟಾಕ್ ರೇಟಿಂಗ್ ಈಗಾಗಲೇ 2.0ಗೆ ಇಳಿದಿದ್ದು, ಟಿಕ್ಟಾಕ್ ಬಳಕೆದಾರರ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿರುವುಕ್ಕೆ ಸಾಕ್ಷಿಯಾಗಿದೆ.
ಈಗಾಗಲೇ ರಾಷ್ಟ್ರೀಯ ಮಹಿಳಾ ಆಯೋಗವೂ ಕೂಡ ಟಿಕ್ ಟಾಕ್ ಆಪ್ ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಸದ್ಯದಲ್ಲಿಯೇ ಟಿಕ್ ಟಾಕ್ ಆಪ್ ಗೆ ಸರ್ಕಾರ ನಿರ್ಬಂಧ ಹೇರಿದರೆ ಆಶ್ಚರ್ಯವಿಲ್ಲ.








