ಬೆಂಗಳೂರು: ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ, ಸಹೋದರ ಡಿ.ಕೆ ಸುರೇಶ್ ಹಾಗೂ ಆಪ್ತರು ಸೇರಿದಂತೆ ದೇಶದ 14 ಕಡೆ ಸಿಬಿಐ ದಾಳಿ ನಡೆದಿತ್ತು. ದಾಳಿ ವೇಳೆ 57 ಲಕ್ಷ ನಗದು ಸಿಕ್ಕಿದೆ ಎಂದು ಸಿಬಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿತ್ತು.
ಆದರೆ, ಸಿಬಿಐ ಶೋಧ ಬಳಿಕ ಮಾತನಾಡಿದ್ದ ಡಿ.ಕೆ ಶಿವಕುಮಾರ್, ನನ್ನ ಮನೆಯಲ್ಲಿ ಸಿಕ್ಕಿದ್ದು ಕೇವಲ 1.77 ಲಕ್ಷ ಮಾತ್ರ. 57 ಲಕ್ಷ ಎಲ್ಲಿ ಸಿಕ್ಕಿದೆ ಎಂಬುದು ಗೊತ್ತಿಲ್ಲ, ಈ ಬಗ್ಗೆ ಸಿಬಿಐನವರೇ ಹೇಳಬೇಕು ಎಂದು ಎಂದು ಸ್ಪಷ್ಟನೆ ನೀಡಿದ್ದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, 57 ಲಕ್ಷದ ಲೆಕ್ಕ ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ನನ್ನ ಮನೆಯಲ್ಲಿ 1.77 ಲಕ್ಷ ಸಿಕ್ಕಿದೆ. ಮನೆ ಪಕ್ಷದ ಕಾಂಗ್ರೆಸ್ ಕಚೇರಿಯಲ್ಲಿ ಕಚೇರಿ ಬಳಕೆ ಇಟ್ಟಿದ್ದ 3.5 ಲಕ್ಷ ಸಿಕ್ಕರೆ, ನಮ್ಮ ತಾಯಿ ವಾಸವಿರುವ ದೊಡ್ಡ ಆಲಹಳ್ಳಿ ಮನೆಯಲ್ಲಿ ಏನೂ ಸಿಕ್ಕಿಲ್ಲ. ದೊಡ್ಡ ಆಲಹಳ್ಳಿ ಮನೆ, ಕೋಡಿಹಳ್ಳಿ, ಕನಕಪುರದ ಮನೆಯಲ್ಲಿ ಏನೂ ಸಿಕ್ಕಿಲ್ಲ. ದಾಖಲೆ ತೆಗೆದುಕೊಂಡು ಹೋಗಿದ್ದಾರಂತೆ.
ಬಾಂಬೆನಲ್ಲಿ ಮನೆ ಇದೆ. ಮಗಳಿಗಾಗಿ ಫ್ಲಾಟ್ ತೆಗೆದುಕೊಂಡಿದ್ದೆ, 6 ವರ್ಷ ಆಯ್ತು ಅಲ್ಲಿಗೆ ಹೋಗಿಲ್ಲ. ಅಲ್ಲಿಯೂ ಏನೂ ಸಿಕ್ಕಿಲ್ಲ. ದೆಹಲಿಯ 2 ಮನೆಯಲ್ಲಿ ಏನೂ ಸಿಕ್ಕಿಲ್ಲ, ಸಹೋದರ ಡಿ.ಕೆ ಸುರೇಶ್ ಮನೆಯಲ್ಲಿ ಹಣ ಸಿಕ್ಕಿಲ್ಲ. ಆದರೆ, ಲಿಕ್ಕರ್ ಉದ್ಯಮಿ ಹಾಗೂ ನಮ್ಮ ಸಂಬಂಧಿ ಸಚಿನ್ ನಾರಾಯಣ್‍ರ ಹಾಸನದ ಮನೆಯಲ್ಲಿ 50 ಲಕ್ಷ ಸಿಕ್ಕಿದೆಯಂತೆ. ಅವರು ಲಿಕ್ಕರ್ ಹಾಗೂ ಹೋಟೆಲ್ ಬ್ಯುಸಿನೆಸ್ ಮಾಡ್ತಾರೆ, ಭಾನುವಾರ ಬ್ಯಾಂಕ್‍ಗಳಿಗೆ ರಜೆ ಇದ್ದ ಕಾರಣ ಮನೆಯಲ್ಲಿ ಕ್ಯಾಶ್ ಇತ್ತಂತೆ. ಫೋನ್ ಮಾಡಿ ಕೇಳಿದಾಗ 50 ಲಕ್ಷ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾಗಿ ಡಿ.ಕೆ ಶಿವಕುಮಾರ್ ಹೇಳಿದರು. ಇದರೊಂದಿಗೆ ಸಿಬಿಐ ಕೊಟ್ಟ 57 ಲೆಕ್ಕ ಸರಿಯಾಗಿದೆ ಎಂದು ಡಿಕೆಶಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ನನಗೆ ಸಿಬಿಐನಿಂದ ಸಮನ್ಸ್ ಬಂದಿಲ್ಲ..!
ನನ್ನ ಮನೆಗಳ ಮೇಲೆ ದಾಳಿ ಮಾಡಿದ ನಂತರ ನನಗೆ ಇದುವರೆಗೆ ಸಿಬಿಐನಿಂದ ಯವುದೇ ಸಮನ್ಸ್ ಬಂದಿಲ್ಲ, ಮುಂದೆ ಬರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜಕಾರಣಕ್ಕೆ ಬರುವುದಕ್ಕೆ ಮೊದಲು ನನ್ನ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂದು ಬಹಿರಂಗಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿಯಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಪ್ರಹ್ಲಾದ್ ಜೋಶಿ ಬಹಳ ದೊಡ್ಡವರು. ಮೊದಲು ಅವರ ಪಕ್ಷದ ನಾಯಕರು ಆಸ್ತಿ ಘೋಷಣೆ ಮಾಡಲಿ. ದೆಹಲಿ ಲೀಡರ್ಸ್, ರಾಜ್ಯದ ಲೀಡರ್ಸ್ ಮೊದಲು ಅವರ ಆಸ್ತಿ ಬಹಿರಂಗ ಮಾಡಲಿ. ಅವರ ಮನೆಯನ್ನು ಮೊದಲು ಶುದ್ಧ ಮಾಡಿಕೊಂಡು ನಮ್ಮ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಹಲ್ಲೆ ಮಾಡಿದ್ದರಿಂದ ಪಿಎ ಅಳುತ್ತಾ ಇದ್ದ..!
ನನ್ನ ಪಿಎ ಮೇಲೆ ಸಿಬಿಐ ಅಧಿಕಾರಿಗಳು ಹಲ್ಲೆ ಮಾಡಿದರು ಎಂದು ಅಳುತ್ತಾ ಇದ್ದ. ಯಾಕೆ ಹಲ್ಲೆ ಮಾಡಿದರು ಎಂದು ಗೊತ್ತಿಲ್ಲ. ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡಂತೆ ಈತನೂ ಆಗಬಾರದು. ಈ ವಿಚಾರದಲ್ಲಿ ಸಿಂಪತಿ ಗಿಟ್ಟಿಸಿಕೊಳ್ಳುವ ಅಗತ್ಯವಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.