ಬೆಂಗಳೂರು : ಕಾಂಗ್ರೆಸ್ ಕಟ್ಟಪ್ಪ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕಕ್ಕೆ ಕೊನೆಗೂ ಮುಹೂರ್ತ ಕೂಡಿ ಬರುವ ಕಾಲ ಹತ್ತಿರವಾಗಿದೆ. ಕೊರೊನಾ ಸಂದಿಗ್ಧತೆಯ ನಡುವೆ ಅಧಿಕಾರ ಸ್ವೀಕರಿಸಲು ಟ್ರಬಲ್ ಶೂಟರ್ ಮುಂದಾಗಿದ್ದಾರೆ. ಮೇ 20 ಅಥವಾ 27 ರಂದು ಡಿ.ಕೆ ಸಾಹೇಬ್ರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬಂಡೆ ಕನಸಿಗೆ ನೀರೆರಚಿದ ಕೊರೊನಾ!
ಎರಡು ಮಾಸಗಳ ಹಿಂದೆಯೇ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿತ್ತು. ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ, ತಮ್ಮ ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ ಬೃಹತ್ ಸಮಾವೇಶದ ಮೂಲಕ ಅಧಿಕಾರ ಸ್ವೀಕರಿಸಲು ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಅವರು ಪ್ಲಾನ್ ಮಾಡಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಇಲ್ಲವೇ ರಾಹುಲ್ ಗಾಂಧಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲು ಪ್ಲಾನ್ ಸಹ ರೂಪಿಸಿದ್ದರು. ಆದರೆ, ಕೊರೊನಾ ಲಾಕ್ ಡೌನ್ ನಿಂದಾಗಿ ಅವರ ಕನಸು ನನಸಾಗದೆ ಹಾಗೆಯೇ ಉಳಿದಿತ್ತು.
ಇದೀಗ ಮೇ 17ರ ಬಳಿಕ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಅಥವಾ ತೆರವಾಗೋ ಸಾಧ್ಯತೆಗಳಿವೆ. ಈ ಹಿನ್ನೆಲೆ ಸರಳವಾಗಿ ಅಧಿಕಾರ ಸ್ವೀಕರಿಸಲು ಶಿವಕುಮಾರ್ ಮುಂದಾಗಿದ್ದಾರೆ. ಮೇ 20 ಇಲ್ಲವೇ 27ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಡಿ.ಕೆ ಶಿವಕುಮಾರ್ ಅವರ ಕನಸಿಗೆ ಕೊರೊನಾ ಅಡ್ಡಿಯಾಗಿದ್ದು, ಬೃಹತ್ ಸಮಾವೇಶದ ಬದಲು ಕೆಪಿಸಿಸಿ ಕಚೇರಿ ಮುಂದೆಯೇ ಸರಳ ಕಾರ್ಯಕ್ರಮದಲ್ಲಿ ಪದಗ್ರಹಣಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ.
ನಿರ್ಗಮಿತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಿಂದ ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.
ತರಾತುರಿಯಲ್ಲಿ ಪದಗ್ರಹಣಕ್ಕೆ ಸಿದ್ಧತೆ ಯಾಕೆ.?
ಕೊರೊನಾ ಕಾಟದ ನಡುವೆ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣಕ್ಕೆ ಮುಂದಾಗಿರೋದು ಯಾಕೆ ಎಂಬುದನ್ನು ನೋಡೋದಾದ್ರೆ.. ಇಲ್ಲಿ ಪ್ರಮುಖವಾಗಿ ಕಾಣ ಸಿಗೋದು “ಕೆಎಸ್ಆರ್ಟಿಸಿಗೆ ಒಂದು ಕೋಟಿ ಚೆಕ್” ವಿಚಾರ. ಹೌದು..! ಇತ್ತೀಚೆಗೆ ಕೆಎಸ್ಆರ್ಟಿಸಿಗೆ ಒಂದು ಕೋಟಿ ಚೆಕ್ ನೀಡುವ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಚೆಕ್ ಮೇಲೆ ದಿನೇಶ್ ಗುಂಡೂರಾವ್ ಸಹಿ, ಹೆಸರು ಇತ್ತು. ಇದನ್ನೇ ಬಳಸಿಕೊಂಡು ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಚಿವ ಆರ್. ಅಶೋಕ್, ನಕಲಿ ಚೆಕ್ ಅಂತಲೂ ಛೇಡಿಸಿದ್ದರು. ಹಾಗಾಗಿ ಇಂತಹ ಮುಜುಗರ ಪ್ರಸಂಗಗಳಿಂದ ತಪ್ಪಿಸಿಕೊಳ್ಳಲು ಕೊರೊನಾ ನಡುವೆಯೂ ತರಾತುರಿಯಲ್ಲಿ ಪದಗ್ರಹಣಕ್ಕೆ ಡಿ.ಕೆ.ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ.