ಬೆಂಗಳೂರು : ನಮ್ಮ ಜನರ ರಕ್ಷಣೆಗೆ ಈಗ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಇದೇ 29 ರಂದು ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಬೀದಿಗಿಳಿದು ಪ್ರತಿಭಟಿಸುತ್ತೇವೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸರ್ಕಾರ ಘೋಷಿಸಿದ ಪರಿಹಾರ ಇನ್ನು ತಲುಪಿಲ್ಲ. ಸರ್ಕಾರ ಕೇಳಿರುವ ದಾಖಲೆ ಒದಗಿಸಲು ಜನರಿಂದ ಸಾಧ್ಯವಾಗುತ್ತಿಲ್ಲ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಪರದಾಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಹಾಗೂ ಅವರ ಕುಂದು ಕೊರತೆಗೆ ಧ್ವನಿಯಾಗಲು ಬ್ಲಾಕ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ನಮ್ಮ ಪಕ್ಷದಿಂದ ವಿಶೇಷ ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ. ವೃತ್ತಿಪರ ಚಾಲಕರ ನೇತೃತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು.
ಇನ್ನು ಶಿಕ್ಷಣ ವಿಚಾರಕ್ಕೆ ಬಂದರೆ, ಪೋಷಕರು ತಮ್ಮ ಮಕ್ಕಳ ಭವಿಷ್ಯ ವಿಚಾರದಲ್ಲಿ ಬಹಳ ಚಿಂತಿತರಾಗಿದ್ದಾರೆ. ಕೆಲವರಿಗೆ ಆನ್ ಲೈನ್ ತರಗತಿ, ಮತ್ತೆ ಕೆಲವರಿಗೆ ಇಲ್ಲ. ಸರಕಾರ ಒಂದು ಸಾರಿ ತೆಗೆದುಕೊಂಡ ನಿರ್ಧಾರ ಮರುಕ್ಷಣ ಬದಲಾಗಿ ಹೋಗುತ್ತದೆ. ಯಾವುದೇ ಯೋಜನೆಯಾಗಲಿ, ಚಿಂತನೆಯಾಗಲಿ ಇಲ್ಲವೇ ಇಲ್ಲ.
ಬಡವರು ತಮ್ಮ ಕಷ್ಟಕ್ಕೆ ನಿವೇಶನ ಮಾರಿದರೆ ಅದಕ್ಕೂ ಜಿಎಸ್ ಟಿ ಕಟ್ಟಬೇಕಂತೆ. ಇಂತಹ ಪದ್ಧತಿ ಎಲ್ಲಾದರೂ ಇದೆಯಾ? ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇನ್ನು ಉದ್ಯೋಗ ಇಲ್ಲದೆ ನಿರುದ್ಯೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಈ ಎಲ್ಲ ವಿಚಾರವಾಗಿ ನಾವು ಹೋರಾಟ ಮಾಡಲಿದ್ದೇವೆ.
ಇದೆ ವೇಳೆ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದ ಅವರು, ಚೀನಾ ಜತೆ ಸಂಘರ್ಷ ವಿಚಾರದಲ್ಲೂ ದೇಶದ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವ ವೀರ ಯೋಧರಿಗೆ ಗೌರವ ಸಲ್ಲಿಸಲು ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೂ ಮೌನಾಚಾರಣೆ ಮಾಡಲಾಗುವುದು. ಅದೇ ರೀತಿ ಜಿಲ್ಲಾ ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ನಮ್ಮ ಯೋಧರಿಗೆ ಗೌರವ ಸಲ್ಲಿಸಲಾಗುವುದು.
ನಮ್ಮ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ನಿನ್ನೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಷ್ಟ್ರಾದ್ಯಂತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.