ಕಾಠ್ಮಂಡು : ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟಿರುವ ಘಟನೆ ನೇಪಾಳದ ಪೂರ್ವ-ಪಶ್ಚಿಮ ಹೆದ್ದಾರಿಯ ಬಂಕೆ ಜಿಲ್ಲೆಯಲ್ಲಿ ನಡೆದಿದೆ.
ಬಂಕೆ ಜಿಲ್ಲೆಯ ತುರಿಯಾ ಅರಣ್ಯ ಪ್ರದೇಶದ ಬಳಿ ನೇಪಾಳಿ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಿಂದ ಕರೆದೊಯ್ಯುತ್ತಿದ್ದ ವಾಹನ, ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ.
ಸದ್ಯ ಎಲ್ಲಾ ಮೃತದೇಹ ಮತ್ತು ಗಾಯಾಳುಗಳನ್ನು ನೇಪಾಳಗುಂಜ್ ನಗರದ ಭೇರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬಂಕೆ ಜಿಲ್ಲಾಧಿಕಾರಿ ರಂಬಹಾದೂರ್ ಕುರುಂಗ್ವಾಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿದ್ದ ವಾಹನವು ವೇಗವಾಗಿ ಚಲಿಸುತ್ತಿತ್ತು. ಈ ವೇಳೆ ಚಾಲಕ ನಿಯಂತ್ರಣ ತಪ್ಪಿದ ವಾಹನ ರಸ್ತೆಬದಿ ನಿಂತಿದ್ದ ಟ್ರಕ್ ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಬಂಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹೃದಯೇಶ್ ಸಪ್ಕೋಟಾ ಮಾಹಿತಿ ನೀಡಿದ್ದಾರೆ.
ಇನ್ನು ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.








