ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ‘ಅಮೆರಿಕ ಫಸ್ಟ್’ ನೀತಿಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದು, ಭಾರತದ ವ್ಯಾಪಾರ ವಲಯಕ್ಕೆ ದೊಡ್ಡ ಆಘಾತ ನೀಡಿದ್ದಾರೆ. ಅಮೆರಿಕದ ಮಾರುಕಟ್ಟೆಗೆ ಭಾರತವು ಅಕ್ಕಿಯನ್ನು ತಂದು ಸುರಿಯುವುದನ್ನು ಅಥವಾ ಡಂಪ್ ಮಾಡುವುದನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಟ್ರಂಪ್ ಕಟುವಾಗಿ ಎಚ್ಚರಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಕಠಿಣ ಸುಂಕಗಳನ್ನು (Tariffs) ವಿಧಿಸುವುದೇ ಏಕೈಕ ಮತ್ತು ಸುಲಭ ಮಾರ್ಗ ಎಂದು ಅವರು ಪ್ರತಿಪಾದಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಕೃಷಿ ವಲಯದ ಪ್ರಮುಖರು ಹಾಗೂ ಉನ್ನತ ಅಧಿಕಾರಿಗಳೊಂದಿಗಿನ ದುಂಡುಮೇಜಿನ ಸಭೆಯಲ್ಲಿ ಟ್ರಂಪ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಲೂಸಿಯಾನದ ಕೆನಡಿ ರೈಸ್ ಮಿಲ್ ಮಾಲೀಕರೆ ಮತ್ತು ಕೃಷಿ ಉದ್ಯಮಿ ಮೆರಿಲ್ ಕೆನಡಿ ಅವರು ಅಮೆರಿಕದ ದಕ್ಷಿಣ ಭಾಗದ ಅಕ್ಕಿ ಬೆಳೆಗಾರರ ನೈಜ ಸ್ಥಿತಿಯನ್ನು ಅಧ್ಯಕ್ಷರ ಮುಂದಿಟ್ಟರು. ಹೊರಗಿನ ರಾಷ್ಟ್ರಗಳು ಅಮೆರಿಕಕ್ಕೆ ಅಕ್ಕಿಯನ್ನು ರಾಶಿ ಹಾಕುತ್ತಿರುವುದರಿಂದ ಸ್ಥಳೀಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.
ಯಾವ ದೇಶಗಳು ಹೀಗೆ ಮಾಡುತ್ತಿವೆ ಎಂದು ಟ್ರಂಪ್ ಕೇಳಿದಾಗ, ಅಧ್ಯಕ್ಷರ ಪಕ್ಕದಲ್ಲೇ ಕುಳಿತಿದ್ದ ಕೆನಡಿ ಅವರು ನೇರವಾಗಿ ಭಾರತ ಮತ್ತು ಥೈಲ್ಯಾಂಡ್ ಹೆಸರನ್ನು ಪ್ರಸ್ತಾಪಿಸಿದರು. ಅಲ್ಲದೆ, ಅಮೆರಿಕದ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದ ಪೋರ್ಟೊ ರಿಕೊಗೆ ಚೀನಾ ಕೂಡ ಅಕ್ಕಿಯನ್ನು ತುಂಬುತ್ತಿದೆ. ಇದರಿಂದಾಗಿ ವರ್ಷಗಳಿಂದ ನಾವು ಅಲ್ಲಿಗೆ ಅಕ್ಕಿ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದು ನಮಗೆ ದೊಡ್ಡ ಹೊಡೆತ ನೀಡಿದೆ ಎಂದು ಅಳಲು ತೋಡಿಕೊಂಡರು.
ಕೆನಡಿ ಅವರ ಮಾತುಗಳನ್ನು ಆಲಿಸಿದ ಟ್ರಂಪ್, ತಕ್ಷಣವೇ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕಡೆಗೆ ತಿರುಗಿ ಭಾರತದ ಬಗ್ಗೆ ಪ್ರಶ್ನಿಸಿದರು. ಭಾರತಕ್ಕೆ ಹೀಗೆ ಮಾಡಲು ಅವಕಾಶ ಏಕೆ ನೀಡಲಾಗಿದೆ? ಅವರು ಸುಂಕಗಳನ್ನು ಪಾವತಿಸಬೇಕು. ಅಕ್ಕಿಯ ಮೇಲೆ ಅವರಿಗೆ ಯಾವುದಾದರೂ ವಿಶೇಷ ವಿನಾಯಿತಿ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಬೆಸೆಂಟ್, ನಾವು ಇನ್ನೂ ಅವರ ವ್ಯಾಪಾರ ಒಪ್ಪಂದದ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ತೃಪ್ತರಾಗದ ಟ್ರಂಪ್, ಭಾರತವು ಅಮೆರಿಕದ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ಸುರಿಯಬಾರದು. ಈ ಬಗ್ಗೆ ನಾನು ಹಲವರಿಂದ ದೂರು ಕೇಳಿದ್ದೇನೆ. ಅವರು ಹಾಗೆ ಮಾಡಲು ಸಾಧ್ಯವಿಲ್ಲ, ಇದನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ, ಅಕ್ಕಿ ಡಂಪಿಂಗ್ ಮಾಡುತ್ತಿರುವ ಭಾರತ, ಥೈಲ್ಯಾಂಡ್ ಮತ್ತು ಚೀನಾದಂತಹ ದೇಶಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಮೆರಿಕದ ರೈತರಿಗೆ ಮುಕ್ತ ವ್ಯಾಪಾರಕ್ಕಿಂತ ನ್ಯಾಯಯುತ ವ್ಯಾಪಾರ ಬೇಕು ಎಂದು ಕೆನಡಿ ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಟ್ರಂಪ್, ಈ ಸಮಸ್ಯೆಯನ್ನು ಬಗೆಹರಿಸುವುದು ತುಂಬಾ ಸುಲಭ. ಅಕ್ರಮವಾಗಿ ಅಥವಾ ಮಿತಿಮೀರಿ ಅಕ್ಕಿ ಸಾಗಣೆ ಮಾಡುತ್ತಿರುವ ಈ ದೇಶಗಳಿಗೆ ಭಾರೀ ಸುಂಕ ವಿಧಿಸಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಇದೇ ಇದಕ್ಕೆ ಪರಿಹಾರ ಎಂದು ಘೋಷಿಸಿದರು.
ಪ್ರಪಂಚದಾದ್ಯಂತದ ರಾಷ್ಟ್ರಗಳ ಮೇಲೆ ಏಕಾಏಕಿ ಸುಂಕ ವಿಧಿಸಲು ಟ್ರಂಪ್ ತುರ್ತು ಅಧಿಕಾರವನ್ನು ಬಳಸುವುದು ಕಾನೂನುಬಾಹಿರ ಎಂದು ಕೆಳ ನ್ಯಾಯಾಲಯಗಳು ತೀರ್ಪು ನೀಡಿವೆ. ಈ ಪ್ರಕರಣ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಈ ಬಗ್ಗೆ ಮಾತನಾಡಿದ ಟ್ರಂಪ್, ನಾವು ಈ ಸುಪ್ರೀಂ ಕೋರ್ಟ್ ಪ್ರಕರಣವನ್ನು ಗೆಲ್ಲಲೇಬೇಕು. ಆಗ ಮಾತ್ರ ಒಂದೇ ದಿನದಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಹಿಂದಿನ ಆಡಳಿತಗಳು ವಿದೇಶಿ ವಸ್ತುಗಳ ಆಮದಿನ ಮೇಲೆ ಸರಿಯಾದ ಸುಂಕ ವಿಧಿಸದ ಕಾರಣ ಅಮೆರಿಕ ತನ್ನ ಕಾರು ಉದ್ಯಮ ಮತ್ತು ಚಿಪ್ ಉದ್ಯಮದ ಅರ್ಧದಷ್ಟು ಪಾಲನ್ನು ಕಳೆದುಕೊಂಡಿತು. ಈಗ ಕೃಷಿ ವಲಯಕ್ಕೂ ಅದೇ ಗತಿ ಬರಲು ಬಿಡುವುದಿಲ್ಲ. ನಮ್ಮ ರೈತರು ವ್ಯವಹಾರದಿಂದ ಹೊರಗುಳಿಯುವುದನ್ನು ನಾನು ನೋಡಲಾರೆ ಎಂದು ಟ್ರಂಪ್ ಹೇಳಿದರು. ಇದೇ ವೇಳೆ ರೈತರಿಗೆ ನೆರವಾಗಲು 12 ಬಿಲಿಯನ್ ಡಾಲರ್ ಫೆಡರಲ್ ಸಹಾಯವನ್ನೂ ಘೋಷಿಸಿದರು.
ಟ್ರಂಪ್ ಅವರ ಈ ನಡೆ ಭಾರತದ ಅಕ್ಕಿ ರಫ್ತುದಾರರಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಉಭಯ ದೇಶಗಳ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದೆ.








